ನವದೆಹಲಿ: ಪುಲ್ವಾಮಾ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿ ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಭಾರಿ ಹೊಡೆತ ನೀಡಿತ್ತು. ಜೊತೆಗೆ ಭಾರತ ಈ ದಾಳಿ ವಿಶ್ವಮಟ್ಟದಲ್ಲಿ ಸುದ್ದಿ ಮಾಡಿತ್ತು.
ಬಾಲಾಕೋಟ್ ದಾಳಿಯ ಬಳಿಕ ಪಾಕಿಸ್ತಾನ ಸಹ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆಯೂ ಇತ್ತು. ಪಾಕಿಸ್ತಾನದ ಸಂಭಾವ್ಯ ದಾಳಿಗೆ ಭಾರತೀಯ ಸೇನೆ ಸಂಪೂರ್ಣ ಸಿದ್ಧವಾಗಿತ್ತು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಸೇನಾಧಿಕಾರಿಗಳ ಜೊತೆ ಸೋಮವಾರದಂದು ನಡೆದ ಗೌಪ್ಯ ಸಭೆಯಲ್ಲಿ ಬಾಲಾಕೋಟ್ ದಾಳಿ ಬಳಿಕ ಸೇನೆ ಎಲ್ಲ ರೀತಿಯ ಪ್ರತಿದಾಳಿಗೂ ಸಿದ್ಧವಾಗಿತ್ತು ಎಂದು ಬಿಪಿನ್ ರಾವತ್ ಹೇಳಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.
ಬಿಪಿನ್ ರಾವತ್ ಮಾತನ್ನು ವಿವರಿಸಿರುವ ಸೇನಾ ಮೂಲಗಳು, ವಾಯುದಾಳಿಯ ಬಳಿಕ ಅನಿವಾರ್ಯವಾದಲ್ಲಿ ಪಾಕಿಸ್ತಾನದ ಜೊತೆಗೆ ಯುದ್ಧಕ್ಕೂ ಭಾರತೀಯ ಸೇನೆ ಸಂಪೂರ್ಣ ಸಜ್ಜಾಗಿತ್ತು ಎನ್ನುವ ಮಾಹಿತಿ ತಿಳಿಸಿದ್ದಾರೆ.