ನವದೆಹಲಿ: ಮಾಲಿನ್ಯವು ವೈರಸ್ ಹರಡುವಿಕೆಯನ್ನು ಹೆಚ್ಚಿಸಬಹುದು. ಮಾಲಿನ್ಯದಿಂದಾಗಿ ಹೆಚ್ಚು ಮಂದಿ ಕೋವಿಡ್-19 ಗೆ ಗುರಿಯಾಗುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ವಾಯುಮಾಲಿನ್ಯವು ಕೊರೊನಾ ವೈರಸ್ ಪ್ರಸರಣವನ್ನು ಹೆಚ್ಚಿಸಬಹುದು ಮತ್ತು ಜನರನ್ನು ರೋಗಕ್ಕೆ ಹೆಚ್ಚು ಗುರಿಯಾಗಿಸಬಹುದು. ಸದ್ಯದ ಕೊವಿಡ್-19 ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಅಷ್ಟೇಅಲ್ಲ ಈ ಹಿಂದೆ ಸೋಂಕಿಗೆ ಒಳಗಾದವರು ಸಹ ಹೊಸ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.
ಇತ್ತ ಕೊರೊನಾ ಲಾಕ್ಡೌನ್ ಹಂತಹಂತವಾಗಿ ಅನ್ಲಾಕ್ ಆಗುತ್ತಿದೆ. ಜೊತೆಗೆ ಚಳಿಗಾಲವೂ ಸಮೀಪಿಸುತ್ತಿದ್ದು, ಗಾಳಿಯ ಗುಣಮಟ್ಟ ಕಳಪೆಯಾಗುತ್ತಿದೆ. ಅದಾಗಲೇ ಭಾನುವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ 'ಕಳಪೆ' ವಿಭಾಗದಲ್ಲಿತ್ತು.
ವೈದ್ಯರ ಪ್ರಕಾರ, ಮಾಲಿನ್ಯದ ಮಟ್ಟದಲ್ಲಿ ಏರಿಕೆಯೊಂದಿಗೆ ಗಾಳಿಯ ಗುಣಮಟ್ಟವು ಕಳಪೆಯಾಗಿ ಉಸಿರಾಟ ಸಂಬಂಧ ಕಾಯಿಲೆಗಳು, ಶ್ವಾಸಕೋಶ ಸಮಸ್ಯೆಗಳು ಹೆಚ್ಚುತ್ತವೆ. ಇದರಿಂದಾಗಿ ದೇಹದೊಳಗೆ ವೈರಸ್ ನುಗ್ಗುವ ಸಾಧ್ಯತೆಯೂ ಹೆಚ್ಚಿದ್ದು, ಕೊರೊನಾ ಹರಡುವಿಕೆ ಸಾಧ್ಯತೆ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.