ಮಧ್ಯಪ್ರದೇಶ : ಪ್ರಕರಣವೊಂದರ ತನಿಖೆಗೆಂದು ತೆರಳಿದ ಪೊಲೀಸರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿ ದಾಳಿ ನಡೆಸಲು ಮುಂದಾದ ಘಟನೆ ರಾಜ್ಘರ್ ಜಿಲ್ಲೆಯ ರಾಂಪುರಿಯಾ ಗ್ರಾಮದಲ್ಲಿ ನಡೆದಿದೆ.
ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಪ್ರಕರಣವೊಂದರ ಹೆಚ್ಚಿನ ತನಿಖೆಗೆಂದು ಪೊಲೀಸರು ಗ್ರಾಮಕ್ಕೆ ತೆರಳಿದಾಗ, ಅಲ್ಲಿ ಲಾಕ್ಡೌನ್ ನಿಯಮಗಳು ಪಾಲನೆಯಾಗದಿರುವುದು ಕಂಡು ಬಂದಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ದೊಣ್ಣೆ, ಕಲ್ಲು ಹಿಡಿದುಕೊಂಡು ಪೊಲೀಸರ ಮೇಲೆ ದಾಳಿ ನಡೆಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಮನಗಂಡ ಪೊಲೀಸರು ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣ ಹೆಚ್ಚುವರಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿತ್ತು, ಹೀಗಾಗಿ ಪೊಲೀಸರನ್ನು ಕಂಡ ತಕ್ಷಣ ಗ್ರಾಮಸ್ಥರು ದಾಳಿಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.