ಕೊಯಮತ್ತೂರು: ತಿರುಪುರ ಜಿಲ್ಲೆಯಲ್ಲಿ ಮಾಸ್ಕ್ ಧರಿಸದ ಹಿನ್ನೆಲೆ ಬೈಕ್ ಸವಾರನಿಗೆ ಪೊಲೀಸ್ ಕಾನ್ಸ್ಟೇಬಲ್ವೋರ್ವ ದಂಡ ವಿಧಿಸಿದ್ದಾರೆ. ಈ ವೇಳೆ ಜಾತಿ ಮಾಹಿತಿ ಕೇಳಿದ್ದಾರೆ ಎನ್ನಲಾದ ಪೊಲೀಸ್ ವಿರುದ್ಧ ಚಾಲಕ ಗರಂ ಆಗಿದ್ದು, ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾನ್ಸ್ಟೇಬಲ್ನನ್ನು ವರ್ಗಾವಣೆ ಮಾಡಲಾಗಿದೆ.
ಲಾಕ್‌ಡೌನ್ ಮಾನದಂಡಗಳನ್ನು ಪಾಲಿಸದವರಿಗೆ ದಂಡ ವಿಧಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹೀಗಾಗಿ ಕಾಶಿರಾಜನ್ ಎಂಬ ಪೊಲೀಸ್ ಕಾನ್ಸ್ಟೇಬಲ್ ತಿರುಪುರ-ಪೆರುಮನಲ್ಲೂರ್ ಜಂಕ್ಷನ್‌ನಲ್ಲಿ ದ್ವಿಚಕ್ರ ವಾಹನ ಸವಾರ ಮಾಸ್ಕ್ ಧರಿಸಿಲ್ಲವೆಂದು ಆತನನ್ನು ತಡೆದಿದ್ದಾರೆ. ಈ ವೇಳೆ ಆತನ ವಿವರ ಮತ್ತು ಜಾತಿಯ ಹೆಸರನ್ನು ಹೇಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗ್ತಿದೆ. ಇದರಿಂದ ಕೋಪಗೊಂಡ ಸವಾರ ಗಲಾಟೆ ಮಾಡಿದ್ದಾನೆ.
ಸದ್ಯ ಇವರಿಬ್ಬರ ವಾಗ್ವಾದದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಾದ ಬಳಿಕ ಪೊಲೀಸ್ ಇಲಾಖೆ ಕಾಶಿರಾಜನ್ ಅವರನ್ನು ಸಶಸ್ತ್ರ ಮೀಸಲು ವಿಭಾಗಕ್ಕೆ ವರ್ಗಾಯಿಸಿದೆ. ಈ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿಜಯ ಕಾರ್ತಿಕೇಯನ್ ಭರವಸೆ ನೀಡಿದ್ದಾರೆ.