ಕಾಸರಗೋಡು : ಪೋಕ್ಸೊ ಪ್ರಕರಣದಡಿ ಬಂಧಿತನಾಗಿರುವ ಆರೋಪಿಯೊಬ್ಬ ಸಾಕ್ಷ್ಯ ಸಂಗ್ರಹಿಸಲು ಕರೆದುಕೊಂಡು ಬಂದ ವೇಳೆ ಸಮುದ್ರಕ್ಕೆ ಹಾರಿ ಪರಾರಿಯಾಗಲು ಯತ್ನಿಸಿದ ಘಟನೆ ನೆಲ್ಲಿಕುನ್ನು ಬಂದರಿನಲ್ಲಿ ನಡೆದಿದೆ.
ಕುಡ್ಲು ಮೂಲದ ಮಹೇಶ್ ಪರಾರಿಯಾಗಲು ಯತ್ನಿಸಿದ ಆರೋಪಿ. ಎಂಟನೇ ತರಗತಿ ಬಾಲಕಿ ಸ್ನಾನ ಮಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದಿರುವ ಆರೋಪದಲ್ಲಿ ಈತನನ್ನು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿ ಮಹೇಶ್ ತಾನು ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಅನ್ನು ನೆಲ್ಲಿಕುನ್ನು ಬಂದರಿನಲ್ಲಿ ಬಂಡೆ ಮಧ್ಯೆ ಬಚ್ಚಿಟ್ಟಿರುವುದಾಗಿ ತಿಳಿಸಿದ್ದ. ಆದ್ದರಿಂದ ಸಾಕ್ಷ್ಯ ಸಂಗ್ರಹಕ್ಕಾಗಿ ಆತನನ್ನು ಪೊಲೀಸರು ಬಂದರಿಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಈಜುಗಾರರು ಹುಡುಕಾಟ ನಡೆಸಿ ಆತನನ್ನು ಪತ್ತೆಹಚ್ಚಿದ್ದಾರೆ. ಆರೋಪಿ ಬಳಸಿದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.