ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಈಗಾಗಲೇ ದೇಶದಲ್ಲಿ ಕೆಲವೊಂದು ಷರತ್ತುಗಳೊಂದಿಗೆ 3.0 ಲಾಕ್ಡೌನ್ ಮುಂದುವರಿದಿದ್ದು, ಮೇ.17ಕ್ಕೆ ಅದು ಮುಕ್ತಾಯಗೊಳ್ಳಲಿದೆ. ಇದರ ಮಧ್ಯೆ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಿರುವ ಸಭೆ ಮಹತ್ವ ಪಡೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ 5ನೇ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಸ್ಥಿತಿ-ಗತಿ, ಲಾಕ್ಡೌನ್ ಮುಂದೂಡಿಕೆ, ಆರ್ಥಿಕ ಚಟುವಟಿಕೆ ಪುನಾರಂಭ, ದೇಶದಲ್ಲಿ ಲಾಕ್ಡೌನ್ ಮುಗಿದ ಬಳಿಕ ತೆಗೆದುಕೊಳ್ಳುವ ಮುಂದಿನ ಹಂತಗಳು ಯಾವ ರೀತಿಯಲ್ಲಿ ಇರಬೇಕು ಎಂಬುದರ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.
ಪ್ರಮುಖವಾಗಿ ಲಾಕ್ಡೌನ್ ಸಡಿಲಿಕೆ ನಂತರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆಯಾ? ಸಡಿಲಿಕೆಯಿಂದ ಸಮಸ್ಯೆ ಆಗಿದೆಯಾ? ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ನಂತರದ ಸ್ಥಿತಿಗತಿ, ರೆಡ್ಜೋನ್ ಹಾಗು ಕಂಟೈನ್ಮೆಂಟ್ ವಲಯದ ನಿಯಂತ್ರಣ, ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ, ಕೋವಿಡ್ ನಿಯಂತ್ರಣ ಪ್ರಮಾಣ ಸೇರಿದಂತೆ ಸವಿಸ್ತಾರವಾಗಿ ಮಾತುಕತೆ ನಡೆಸಲಿದ್ದಾರೆ.
ಈಗಾಗಲೇ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 62 ಸಾವಿರ ಗಡಿ ದಾಟಿದ್ದು, ಸಾವಿನ ಸಂಖ್ಯೆ 2109 ಆಗಿದೆ. ಹೀಗಾಗಿ ಪ್ರಧಾನಿ ಮೋದಿ ನಡೆಸಲಿರುವ ವಿಡಿಯೋ ಕಾನ್ಫರೆನ್ಸ್ ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿರುವ ಕಾರಣ ಅಲ್ಲಿನ ಮುಖ್ಯಮಂತ್ರಿಗಳಿಗೆ ಮತ್ತಷ್ಟು ಜವಾಬ್ದಾರಿ ನೀಡಿ ನಿಯಂತ್ರಣ ಮಾಡಲು ಸಹಲೆ ನೀಡುವ ಸಾದ್ಯತೆ ದಟ್ಟವಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ನವದೆಹಲಿ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರೊಂದಿಗೆ ನಮೋ ವಿಡಿಯೋ ಸಂವಾದದಲ್ಲಿ ಭಾಗಿಯಾಗಲಿದ್ದು, ಕೊರೊನಾ ವೈರಸ್ ಪರಿಸ್ಥಿತಿ ಹಾಗೂ ಸೋಂಕು ಹರಡುವುದನ್ನ ತಡೆಗಟ್ಟಲು ವಿವಿಧ ರಾಜ್ಯಗಳು ಕೈಗೊಂಡಿದ್ದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸೇರಿದಂತೆ ಗೃಹ ಮತ್ತು ಆರೋಗ್ಯ ಕಾರ್ಯದರ್ಶಿ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.