ನವದೆಹಲಿ: ಬಾಂಗ್ಲಾ ದೇಶದ ಸಂಸ್ಥಾಪಕ ಹಾಗೂ ಮೊದಲ ಪ್ರಧಾನಿ ಶೇಖ್ ಮುಜಿಬುರ್ ರಹಮಾನ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮಾ.16ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ಮೋದಿ ಅವರ ಭೇಟಿಯಲ್ಲಿ ದ್ವಿಪಕ್ಷೀಯ ಮಾತುಕತೆಯೂ ಇರುತ್ತದೆ. ಆದರೆ ಈ ಭೇಟಿಯ ಬಗ್ಗೆ ಮೋದಿ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ಮೋದಿಯವರನ್ನು ಶೇಖ್ ಮುಜಿಬುರ್ ರಹಮಾನ್ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದರು.
ಬಾಂಗ್ಲಾದೇಶದ ಸ್ಥಾಪಕ "ಬಂಗಬಂಧು" ಎಂದೂ ಕರೆಯಲ್ಪಡುವ ಶೇಖ್ ಮುಜಿಬುರ್ ರಹಮಾನ್ 1920 ರ ಮಾರ್ಚ್ 17 ರಂದು ಫರೀದ್ಪುರ ಜಿಲ್ಲೆಯ ತುಂಗೀಪರ ಗ್ರಾಮದಲ್ಲಿ ಜನಿಸಿದರು.
ಪಿಎಂ ಮೋದಿ ಮಾರ್ಚ್ 16 ರಿಂದ 18 ರವರೆಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಬಾಂಗ್ಲಾದೇಶದ ಢಾಕಾ ಟ್ರಿಬ್ಯೂನ್ ವರದಿ ಮಾಡಿತ್ತು. ಅಲ್ಲಿ ಅವರು ಶೇಖ್ ಹಸೀನಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಮೂರು ದಿನಗಳ ಭೇಟಿಗಾಗಿ ಪ್ರಧಾನಿ ಮಾರ್ಚ್ 16 ರಂದು ಢಾಕಾಕ್ಕೆ ಆಗಮಿಸಲಿದ್ದಾರೆ. ಮಾರ್ಚ್ 17 ರಂದು ಶೇಖ್ ಮುಜಿಬುರ್ ರಹಮಾನ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.