ರೋಹ್ಟಂಗ್: ಹಿಮಾಚಲ ಪ್ರದೇಶದ ರೋಹ್ಟಂಗ್ನಲ್ಲಿ ನಿರ್ಮಿಸಲಾಗಿರುವ ಮನಾಲಿಯಿಂದ ಲಾಹೌಲ್ ಕಣಿವೆಯನ್ನು ವರ್ಷವಿಡೀ ಸಂಪರ್ಕಿಸುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ 'ಅಟಲ್ ಟನಲ್'ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಲೋಕಾರ್ಪಣೆ ಬಳಿಕ ಮಾತನಾಡಿದ ಪಿಎಂ ಮೋದಿ, ಗಡಿ ಮೂಲ ಸೌಕರ್ಯವನ್ನು ಸುಧಾರಿಸುವ ಬೇಡಿಕೆಗಳಿದ್ದವು. ಆದರೆ ದೀರ್ಘ ಕಾಲದವರೆಗೆ ಅಂತಹ ಯೋಜನೆಗಳು ಪೂರ್ಣಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಅಟಲ್ ಸುರಂಗವು ಭಾರತದ ಗಡಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೊಸ ಬಲವನ್ನು ನೀಡಲಿದೆ. ಇದು ವಿಶ್ವದರ್ಜೆಯ ಗಡಿ ಸಂಪರ್ಕಕ್ಕೆ ಉದಾಹರಣೆಯಾಗಿದೆ ಎಂದರು.
2002ರಲ್ಲೇ ಅಟಲ್ ಬಿಹಾರಿ ವಾಜಪೇಯಿ ಇದಕ್ಕೆ ಅಡಿಪಾಯ ಹಾಕಿದ್ದರು. 2013ರಿಂದ 2014ರವರೆಗೆ ಸುರಂಗದ 1,300 ಮೀಟರ್‌ಗಳಷ್ಟು ಮಾತ್ರ ಕಾಮಗಾರಿ ನಡೆಯಿತು. 2014ರ ಬಳಿಕ ಅಭೂತಪೂರ್ವ ವೇಗದಲ್ಲಿ ಈ ಯೋಜನೆ ಪ್ರಗತಿ ಸಾಧಿಸಿತು. ಇತರ ಹಲವು ಪ್ರಮುಖ ಯೋಜನೆಗಳನ್ನು ಅಟಲ್ ಸುರಂಗದಂತೆಯೇ ಪರಿಗಣಿಸಲಾಯಿತು. ಆದರೆ ಲಡಾಖ್ನಲ್ಲಿರುವ ದೌಲತ್ ಬೇಗ್ ಓಲ್ಡಿ ವಾಯುನೆಲೆ 40-45 ವರ್ಷಗಳಿಂದ ಮುಚ್ಚಲ್ಪಟ್ಟಿದೆ. ಇದಕ್ಕೆ ಕಾರಣ ಹಾಗೂ ಇದರ ಹಿಂದಿನ ಅಸಹಾಯಕತೆ, ಒತ್ತಡದ ಕುರಿತು ವಿವರಿಸಲು ಈಗ ಆಗುವುದಿಲ್ಲ ಎಂದು ಮೋದಿ ಹೇಳಿದರು.
ಅಟಲ್ ಟನಲ್ನ ಪ್ರಯೋಜನಗಳನ್ನು ಸಾಮಾನ್ಯ ಜನರಿಗೆ ಮತ್ತು ನಮ್ಮ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ವಿಸ್ತರಿಸಲಾಗುತ್ತಿದೆ. ದೇಶವನ್ನು ರಕ್ಷಿಸುವುದಕ್ಕಿಂತ ಇನ್ನೇನೂ ನಮಗೆ ಮುಖ್ಯವಲ್ಲ. ಆದರೆ ದೇಶದ ರಕ್ಷಣಾ ಹಿತಾಸಕ್ತಿಗಳಿಗೆ ಧಕ್ಕೆಯುಂಟಾದ ಅವಧಿಯನ್ನೂ ಭಾರತ ಕಂಡಿದೆ ಎಂದರು.
ಎಂಜಿನಿಯರಿಂಗ್ ಮತ್ತು ತಾಂತ್ರಿಕ ಅಧ್ಯಯನ ಸಂಬಂಧಿತ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅಟಲ್ ಟನಲ್ ಬಗ್ಗೆ ಕೇಸ್ ಸ್ಟಡಿ ಮಾಡಲು ಅವಕಾಶ ನೀಡಬೇಕೆಂದು ನಾನು ಶಿಕ್ಷಣ ಸಚಿವಾಲಯದ ಬಳಿ ಮನವಿ ಮಾಡುತ್ತೇನೆ. ಈ ಸುರಂಗವನ್ನು ಹೇಗೆ ನಿರ್ಮಿಸಲಾಗಿದೆ ಎಂಬುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ಮೋದಿ ಒತ್ತಾಯಿಸಿದ್ದಾರೆ.
ಅಟಲ್ ಟನಲ್ನ ವಿಶೇಷತೆಗಳು:
ಅಟಲ್ ಟನಲ್, 9.02 ಕಿ.ಮೀ. ಉದ್ದದ ಸುರಂಗ ಮಾರ್ಗವಾಗಿದ್ದು, 3,200 ಕೋಟಿ ರೂ. ವೆಚ್ಚದಲ್ಲಿ ಎರಡು ದಶಕಗಳ ಕಾಲ ಇದರ ಕಾಮಗಾರಿ ನಡೆದಿದೆ. ಇದು ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸಲಿದ್ದು, ಈ ಪ್ರದೇಶಗಳ ನಡುವಿನ 46 ಕಿ.ಮೀ.ಗಳಷ್ಟು ಅಂತರವನ್ನು ಕಡಿಮೆ ಮಾಡಲಿದೆ. ಅಟಲ್ ಸುರಂಗವು ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿಯ ಸುರಂಗವಾಗಿದೆ. ಇದು ಸಮುದ್ರ ಮಟ್ಟದಿಂದ ಸರಾಸರಿ 3000 ಮೀಟರ್ ಎತ್ತರ (10 ಸಾವಿರ ಅಡಿ)ದಲ್ಲಿದೆ.
ಈ ಸುರಂಗ ಮಾರ್ಗವು 10.5 ಮೀಟರ್ ಅಗಲವಿದ್ದು, ಮುಖ್ಯ ಸುರಂಗದಲ್ಲಿ 3.6 x 2.25 ಮೀಟರ್ ಅಗ್ನಿ ನಿರೋಧಕ ತುರ್ತು ನಿರ್ಗಮನದ ಸುರಂಗವನ್ನೂ ಒಳಗೊಂಡಿದೆ. ಅಟಲ್ ಸುರಂಗವನ್ನು 3,000 ಕಾರುಗಳು ಮತ್ತು 1,500 ಟ್ರಕ್ಗಳು ನಿತ್ಯ ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ ಓಡಾಡಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ.
ರೋಹ್ಟಾಂಗ್ ಪಾಸ್ ಕೆಳಗೆ ವ್ಯೂಹಾತ್ಮಕ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು 2000ರ ಜೂನ್ 3ರಂದು ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ತೆಗೆದುಕೊಂಡಿದ್ದರು.