ಗಾಂಧಿನಗರ: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ 144ನೇ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ನರ್ಮದಾ ನದಿ ತಟದಲ್ಲಿರುವ ಏಕತಾ ಪ್ರತಿಮೆಗೆ ಭೇಟಿ ನೀಡಿ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವ ಸಮರ್ಪಿಸಿದರು.
ಬಳಿಕ ಮಾತನಾಡಿದ ಅವರು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನ 370ನೇ ವಿಧಿಯನ್ನು ಹಿಂದಕ್ಕೆ ಪಡೆಯಬೇಕು ಎಂಬುದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕನಸಾಗಿತ್ತು. ಅದನ್ನು ಜಾರಿಗೆ ತರುವ ಮೂಲಕ ಅವರ ಕನಸನ್ನು ನನಸು ಮಾಡಿದ್ದೇವೆ ಎಂದರು.
ವಿವಿಧತೆಯಲ್ಲಿನ ಏಕತೆಯೇ ನಮ್ಮ ಹೆಗ್ಗುರುತು. ಸರ್ದಾರ್ ಪಟೇಲ್ ಅವರ ಐಕ್ಯತೆ ಮತ್ತು ಅವರ ದೃಷ್ಟಿಕೋನದಲ್ಲಿ ನಾನು ಕೆಲಸ ಮಾಡುತ್ತೇನೆ. ನನ್ನ ದೇಶದ ಆಂತರಿಕ ಭದ್ರತೆ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡುವಂತೆ ನೆರೆದ ಜನರಿಂದ ಮೋದಿ ವಾಗ್ದಾನ ಪಡೆದರು.
ತಾಯಿ ಹೀರಾ ಬೆನ್ ಭೇಟಿ:
ಸರ್ದಾರ್ ವಲ್ಲಭಾಯ್ ಪಟೇಲ್ ಅವರಿಗೆ ಗೌರವ ಸೂಚಕವಾಗಿ 2018ರಲ್ಲಿ ನಿರ್ಮಾಣ ಮಾಡಲಾದ 182 ಮೀಟರ್ ಎತ್ತರದ ಏಕತಾ ಪ್ರತಿಮೆಗೆ ಮೋದಿ ಭೇಟಿ ಕೊಟ್ಟರು. ಬುಧವಾರ ರಾತ್ರಿ ಮೋದಿ ಅಹ್ಮದಾಬಾದ್ಗೆ ಬಂದಿಳಿದು ತಾಯಿ ಹೀರಾ ಬೆನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ‘ಏಕತಾ ಓಟ’ಕ್ಕೆಚಾಲನೆ ನೀಡಿದರು.
ವಿವಿಧ ಗಣ್ಯರಿಂದ ಗೌರವ ನುಡಿ:
ದೇಶಾದ್ಯಂತ ಇಂದು 'ರಾಷ್ಟ್ರೀಯ ಏಕತಾ ದಿನ' ಎಂದು ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ನಾನಾ ಕ್ಷೇತ್ರಗಳ ಗಣ್ಯರು ಪಟೇಲ್ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.