ನವದೆಹಲಿ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಜೀವನ ರೈತರಿಗೆ ಸಮರ್ಪಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.
ಇಂದು ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಪಿಎಂ ಮೋದಿ, ದೇವೇಗೌಡರಿಗೆ ನಾನು ಆಭಾರಿಯಾಗಿರುವೆ. ಅವರ ಜೀವನ ರೈತರಿಗೆ ಸಮರ್ಪಿತವಾಗಿದೆ. ಕೃಷಿ ಕುರಿತ ಚರ್ಚೆಗಳಲ್ಲಿ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಅವರ ಕೊಡುಗೆಯನ್ನು ಪ್ರಶಂಸಿಸುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನ ಪ್ರಧಾನಿ ಹಾಡಿ ಹೊಗಳಿದ್ದಾರೆ.
ಕೃಷಿ ಕುರಿತ ಚರ್ಚೆಗಾಗಿ ರಾಜ್ಯಸಭಾ ಕಲಾಪದಲ್ಲಿ 13 ಗಂಟೆಗಳ ಕಾಲ 50 ಸಂಸದರು ತನ್ನ ಅಮೂಲ್ಯವಾದ ಸಲಹೆ, ಅಭಿಪ್ರಾಯಗಳನ್ನು ನೀಡಿದ್ದಾರೆ ಎಂದ ಪ್ರಧಾನಿ ಮೋದಿ, ದೇವೇಗೌಡರ ಜೊತೆ ಮನಮೋಹನ್ ಸಿಂಗ್ ಬಗ್ಗೆ ಕೂಡ ಮಾತನಾಡಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯೊಂದನ್ನು ಮೋದಿ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. "1930ರ ದಶಕದಲ್ಲಿ ಸ್ಥಾಪಿಸಲಾದ ಮಾರ್ಕೆಟಿಂಗ್ ಆಡಳಿತದಿಂದಾಗಿ ನಮ್ಮ ರೈತರು ತಮ್ಮ ಉತ್ಪನ್ನಗಳಿಗೆ ಎಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೋ ಅಲ್ಲಿ ಮಾರಾಟ ಮಾಡಲು ಅಡೆತಡೆಗಳಿವೆ" ಎಂದು ಮನಮೋಹನ್ ಸಿಂಗ್ ಅವರೇ ಹೇಳಿದ್ದರು. ಈಗ ಯು-ಟರ್ನ್ (ಕೃಷಿ ಕಾನೂನುಗಳ ವಿಚಾರದಲ್ಲಿ) ತೆಗೆದುಕೊಳ್ಳುವವರು ಬಹುಶಃ ಸಿಂಗ್ರ ಈ ಹೇಳಿಕೆಯನ್ನು ಒಪ್ಪುತ್ತಾರೆ ಎಂದು ಟಾಂಗ್ ನೀಡಿದರು.
ಒಂದು ಬೃಹತ್ ಮಾರುಕಟ್ಟೆಯನ್ನು ಸ್ಥಾಪಿಸುವ ಮೂಲಕ ರೈತರಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವುದು ನಮ್ಮ ಉದ್ದೇಶವಾಗಿದೆ ಎಂದು ಮೋದಿ ತಮ್ಮ ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.