ನವದೆಹಲಿ: ಮಕ್ಕಳಲ್ಲಿ ತಂತ್ರಜ್ಞಾನ ಬಳಕೆಯಿಂದ ಕಲಿಕಾ ಗುಣಮಟ್ಟ ಮತ್ತು ಹೊಂದಾಣಿಕೆ ಗುಣ ಹೆಚ್ಚಿಸುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯ ಸುಧಾರಣೆ ತರುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಅವರು ಚರ್ಚಿಸಿದ್ದಾರೆ. ಭಾರತೀಯ ಶಿಕ್ಷಣ ವ್ಯವಸ್ಥೆ ನೀತಿ ನಿರೂಪಣೆಗಳ ಬಗ್ಗೆಯೂ ಚರ್ಚಿಸಲಾಯಿತು.
ತಂತ್ರಜ್ಞಾನ ಬಳಕೆ, ಆನ್‌ಲೈನ್ ತರಗತಿ, ಮೀಸಲಿಟ್ಟಿರುವ ಎಜುಕೇಷನ್ ಚಾನೆಲ್ಗಳ ಮೂಲಕ ಮಕ್ಕಳಿಗೆ ಕಲಿಕಾ ಗುಣಮಟ್ಟ ಹೆಚ್ಚಿಸಲು ವಿಶೇಷ ಒತ್ತು ನೀಡಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1986ರಲ್ಲೇ ರೂಪಿಸಲಾಯಿತು. 1992ರಲ್ಲಿ ಅದನ್ನು ಮಾರ್ಪಾಡು ಮಾಡಲಾಯಿತು. ನೀತಿ ರೂಪಿಸಿ ಮೂರು ದಶಕಗಳಾದ ಪರಿಣಾಮ ಹೊಸದಾಗಿ ಬದಲಾವಣೆ ಮಾಡುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಲಾಕ್ಡೌನ್ ಅನ್ನು ಮೇ 4 ರಿಂದ ಮತ್ತೆ 2 ವಾರಗಳ ಕಾಲ ವಿಸ್ತರಿಸಲಾಗಿದೆ. ಲಾಕ್ಡೌನ್ ಘೋಷಣೆಯಾದಾಗಿನಿಂದಲೇ ವಿದ್ಯಾರ್ಥಿಗಳಿಗೆ ಕೆಲ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಮೂಲಕವೇ ಪಾಠ-ಪ್ರವಚನ ಮಾಡುತ್ತಿವೆ. ಹೀಗಾಗಿ ಆನ್‌ಲೈನ್ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.
ಶಿಕ್ಷಣದಲ್ಲಿ ಏಕರೂಪತೆ ಜಾರಿಗೆ ತರುವುದು, ಗುಣಮಟ್ಟದ ಶಿಕ್ಷಣ ಮತ್ತು ಹೊಸ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಸುಧಾರಣೆ ತರಲು ಹೆಚ್ಚು ಕೇಂದ್ರೀಕರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಕ್ಕಳಿಗೆ ಬಹು ಭಾಷಾ ಜ್ಞಾನ, 21ನೇ ಶತಮಾನದ ಕೌಶಲ, ಕಲೆ ಮತ್ತು ಕ್ರೀಡೆಯ ಏಕೀಕರಣ ಹಾಗೂ ಪರಿಸರ ವಿಷಯಗಳ ಕುರಿತು ಗಮನ ಹರಿಸಬೇಕು. ಶಾಲೆಗಳಲ್ಲಿ ಉನ್ನತ ಮಟ್ಟದ ಶಿಕ್ಷಣದ ಸುಧಾರಣೆಗೆ ತಂತ್ರಜ್ಞಾನದ (ಆನ್‌ಲೈನ್ ಮೋಡ್, ಟಿವಿ ಚಾನೆಲ್, ರೇಡಿಯೋ ಮತ್ತು ಪಾಡ್‌ಕಾಸ್ಟ್) ಬಳಕೆಗೆ ಆದ್ಯತೆ ನೀಡುವಂತೆ ಸೂಚಿಸಿದೆ. ತಂತ್ರಜ್ಞಾನದ ವ್ಯಾಪಕ ಬಳಕೆ ಉತ್ತೇಜಿಸಲಾಗುವುದು ಎಂದು ಅದು ಹೇಳಿದೆ.