ನವದೆಹಲಿ: ದೇಶದ ಅತಿ ದೊಡ್ಡ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಅನೇಕ ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡ ನಮೋ ನೆರೆಯ ದೇಶ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೊರೊನಾ ವೈರಸ್ ವೇಗವಾಗಿ ಬೆಳೆಯುತ್ತಿರುವ ಸಮಯದಲ್ಲಿ ಅನೇಕ ದೇಶಗಳು ತಮ್ಮ ನಾಗರಿಕರನ್ನ ವಾಪಸ್ ಕರೆಯಿಸಿಕೊಳ್ಳಲು ಹಿಂದೇಟು ಹಾಕಿದರು. ಆದರೆ, ಭಾರತ ಚೀನಾದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಪ್ರತಿಯೊಬ್ಬ ಭಾರತೀಯರು ಹಾಗೂ ಬೇರೆ ದೇಶದ ಜನರನ್ನು ನಾವು ಮರಳಿ ಕರೆತಂದಿದ್ದೇವೆ ಎಂದು ಪಾಕ್ಗೆ ತಿರುಗೇಟು ನೀಡಿದ್ದಾರೆ. ಕೊರೊನಾ ವೈರಸ್ ಸಮಯದಲ್ಲಿ ಪಾಕ್ ತನ್ನ ದೇಶದ ಜನರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಹಿಂದೇಟು ಹಾಕಿತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ.
ಓದಿ: ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡು ಎಲ್ಲರಿಗೂ ಸ್ಫೂರ್ತಿ ತುಂಬಿದ ಸೆರಂ ಸಿಇಒ!
ಕಳೆದ ಒಂದು ವರ್ಷದಿಂದ ಕೊರೊನಾ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಅನೇಕ ಸಾವು ಸಂಭವಿಸಿದೆ ಎಂದು ನಮೋ ಭಾವುಕರಾದರು. ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಹೋರಾಟ ಆತ್ಮವಿಶ್ವಾಸದಿಂದ ತುಂಬಿದ್ದು, ಈ ಕಷ್ಟದ ಅವಧಿಯಲ್ಲಿ ಪ್ರತಿಯೊಬ್ಬ ಭಾರತೀಯರು ಸಂಕಲ್ಪ ತೊಟ್ಟಿದ್ದರು ಎಂದರು.
ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಹೋರಾಟ ನಡೆಸಿರುವ ರೀತಿಗೆ ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿದೆ. ಕೇಂದ್ರ, ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆ, ಪ್ರತಿ ಸರ್ಕಾರಿ ಹಾಗೂ ಸಾಮಾಜಿಕ ಸಂಸ್ಥೆಗಳು ಅದ್ಭುತವಾಗಿ ಕೆಲಸ ಮಾಡಿವೆ ಎಂದಿದ್ದಾರೆ. ದೇಶಾದ್ಯಂತ ಇಂದಿನಿಂದ ಕೊರೊನಾ ವ್ಯಾಕ್ಸಿನ್ ಹಂಚಿಕೆ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ನೀಡಲಾಗುತ್ತಿದೆ.