ಘಾಜಿಯಾಬಾದ್: ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಾಗ್ದಾಳಿ ನಡೆಸಿದ್ದಾರೆ.
ಘಾಜಿಯಾಬಾದ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಿಯಾಂಕಾ, ಪ್ರಧಾನಿ ಮೋದಿ ವಿಶ್ವ ಪರ್ಯಟನೆ ಮಾಡಿ ಬಂದಿದ್ದಾರೆ. ಜಪಾನ್ಗೆ ತೆರಳಿ ಅಲ್ಲಿನ ನಾಯಕರನ್ನ ಅಪ್ಪಿಕೊಂಡರು, ಜಪಾನ್ಗೆ ತೆರಳಿ ಅಲ್ಲೂ ಹಾಗೇ ಮಾಡಿದರು. ಪಾಕ್ಗೆ ತೆರಳಿ ಅಲ್ಲಿನ ಬಿರಿಯಾನಿ ತಿಂದು, ನವಾಜ್ ಷರೀಫ್‌ರನ್ನ ಅಪ್ಪಿಕೊಂಡಿದ್ದರು. ಚೀನಾ ಪ್ರವಾಸ ಕೈಗೊಂಡು ಅಲ್ಲಿನ ನಾಯಕರ ಗಲೇ ಅಪ್ಪಿಕೊಂಡರು. ಆದರೆ, ವಾರಣಾಸಿಯ ಯಾವೊಬ್ಬ ರೈತ ಅಥವಾ ಬಡವನನ್ನ ಅಪ್ಪಿಕೊಳ್ಳುತ್ತಿಲ್ಲವೇಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಿಮಗಾಗಿ ಕೆಲಸ ಮಾಡಲು ಬಯಸುತ್ತದೆ. ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದು, ಅನ್ನದಾತರಿಗೆ ಕನಿಷ್ಠ ವೇತನ ನೀಡಲು ನಾವು ಸಿದ್ಧ ಎಂದು ಭರವಸೆ ನೀಡಿದರು.