ಪಾಟ್ನಾ: ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಒಂದೇ ರಾತ್ರಿಯಲ್ಲಿ ಸುದ್ದಿಯಾಗಿದ್ದ ಪಾಪ್ಯುಲರ್ ಪ್ಲೂರಲ್ಸ್ ಪಾರ್ಟಿ ಮುಖ್ಯಸ್ಥೆ ಪ್ರಿಯಾ ಚೌಧರಿ ನಂತರ ಅವರ ಪಕ್ಷದ ಅಭ್ಯರ್ಥಿಯೊಬ್ಬರು ಬಿಹಾರದಲ್ಲಿ ಸುದ್ದಿಯಾಗುತ್ತಿದ್ದಾರೆ.
ಪಾಪ್ಯುಲರ್ ಪ್ಲೂರಲ್ಸ್ ಪಾರ್ಟಿ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಲು ಹಣವಿಲ್ಲದೆ ಭಿಕ್ಷೆ ಬೇಡುತ್ತಿದ್ದಾರೆ. ಬಿಹಾರದ ಝಾಝಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸೂರ್ಯವತ್ಸ್ ಅವರು ಸಾಮಾಜಿಕ ಕಾರ್ಯಗಳಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಈ ಪ್ರದೇಶದಲ್ಲಿ ಅಪಾರ ಜನಪ್ರಿಯರಾಗಿದ್ದಾರೆ. ಅವರ ಉದಾರ ಕಾರ್ಯಕ್ಕಾಗಿ ಅವರನ್ನು ಗಾಂಧೀಜಿ ಎಂದೂ ಕರೆಯುತ್ತಾರೆ.
ಈಟಿವಿ ಭಾರತದ ಜೊತೆ ಮಾತನಾಡಿರುವ ಅವರು, ನಾನು ತುಂಬಾ ಬಡವನಾಗಿದ್ದು, ಜಿಲ್ಲಾಧಿಕಾರಿ ಕಚೇರಿ ತಲುಪಲೂ ನನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ.
'ನನ್ನ ಬಳಿ ಉತ್ತಮ ಬಟ್ಟೆ ಇಲ್ಲ ಮತ್ತು ಪ್ರಯಾಣ ವೆಚ್ಚವನ್ನು ಭರಿಸಲಾಗದ ಕಾರಣ ಭಿಕ್ಷೆ ಬೇಡುತ್ತಿದ್ದೇನೆ. ಊಟಕ್ಕಾಗಿ ಕಷ್ಟ ಪಡುತ್ತಿರುವ ಸ್ಥಳೀಯ ಜನರಿಗೆ ನನ್ನನ್ನು ನಾನು ಅರ್ಪಿಸಿಕೊಳ್ಳುತ್ತೇನೆ' ಎಂದು ಸೂರ್ಯವತ್ಸ್ ಹೇಳಿದ್ದಾರೆ.
ಜನರು ತಮಗೆ ಮತ ನೀಡುವ ಭರವಸೆ ನೀಡಿದ್ದು, ನಾನು ಖಂಡಿತವಾಗಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.