ಶ್ರೀನಗರ: ಐಎಸ್ಐಎಸ್ ಉಗ್ರ ಸಂಘಟನೆ ಸೇರಿ, ಇದೀಗ ಸಿರಿಯಾದಲ್ಲಿ ಬಂಧಿತನಾಗಿರುವ ಮಗನನ್ನು ಭಾರತಕ್ಕೆ ವಾಪಸ್ ಕರೆತನ್ನಿ ಎಂದು ಕಾಶ್ಮೀರದ ವ್ಯಕ್ತಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಾಶ್ಮೀರ ನಿವಾಸಿಯ ಫಯಾಸ್ ಅಹ್ಮದ್ ಎಂಬುವರ ಈ ಮನವಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಕೇಂದ್ರ ಸರ್ಕಾರಕ್ಕೆ ತಲುಪಿಸಿದ್ದಾರೆ. ತನ್ನ ಮಗ ಆದಿಲ್ ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಪಡೆಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಭಾರತಕ್ಕೆ ಕರೆತನ್ನಿ ಎಂದು ಫಯಾಸ್ ಮನವಿ ಮಾಡಿದ್ದಾರೆ.
ಇವರ ಮಗ ಆದಿಲ್ ಅಹ್ಮದ್ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ಎಂಬಿಎ ಪೂರೈಸಿ, ಆನಂತರ ಐಎಸ್ಐಎಸ್ ಉಗ್ರ ಸಂಘಟನೆ ಸೇರಿದ್ದನು. ಅಮೆರಿಕಾ ನೇತೃತ್ವದ ಸಿರಿಯಾ ಪಡೆ ಐಎಸ್ಐಎಸ್ ಉಗ್ರರೊಂದಿಗೆ ಈತನನ್ನೂ ಬಂಧಿಸಿ, ವಶದಲ್ಲಿರಿಸಿಕೊಂಡಿದೆ ಎಂದು ತಿಳಿದುಬಂದಿದೆ.
2013ರಲ್ಲಿ ಸಿರಿಯಾಗೆ ತೆರಳಿದ್ದ ಆದಿಲ್, ಎನ್ಜಿಒದಲ್ಲಿ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ. ಆದರೆ, ಉಗ್ರ ಸಂಘಟನೆ ಸೇರಿದ್ದಾನೆಂದು ನಂಬಲೂ ಸಾಧ್ಯವಾಗುತ್ತಿಲ್ಲ. ಕುಟುಂಬಕ್ಕೆ ಆಧಾರವಾಗಿರುವ ಈತನನ್ನು ಕೇಂದ್ರ ಸರ್ಕಾರ ವಾಪಸ್ ಕರೆತಂದು, ನಮಗೆ ಒಪ್ಪಿಸಬೇಕು ಎಂದು ಕಂಟ್ರಾಕ್ಟರ್ ಕೆಲಸ ಮಾಡುತ್ತಿರುವ ಫಯಾಸ್ ಗೋಗರೆದಿದ್ದಾರೆ. ಹೊಸ ಸರ್ಕಾರ ಖಂಡಿತ ಈ ಕೆಲಸ ಮಾಡುತ್ತೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಫಯಾಸ್ ಸಲ್ಲಿಸಿರುವ ಅರ್ಜಿಯನ್ನು ಪೊಲೀಸರು ಕೇಂದ್ರದ ಭದ್ರತಾ ಏಜೆನ್ಸಿಗೆ ರವಾನೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಒಂದು ವೇಳೆ ಆದಿಲ್ನನ್ನು ಕರೆತಂದಿದ್ದೇ ಆದರೆ ಆತನನ್ನು ಸಂಪೂರ್ಣವಾಗಿ ತನಿಖೆಗೆೊಳಪಡಿಸಲು ನಮ್ಮ ಸುಪರ್ದಿಗೆ ನೀಡಬೇಕು ಎಂದೂ ಕೇಳಿಕೊಂಡಿದ್ದಾರೆ.
ಭಾರತೀಯ ಪಾಸ್ಪೋರ್ಟ್ ಮೂಲಕ ಟರ್ಕಿಗೆ ಹೋಗಿದ್ದ ಆದಿಲ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದ. ಆನಂತರ ಐಎಸ್ಐಎಸ್ ನಿಯಂತ್ರಿತ ಸಿರಿಯಾಗೆ ತೆರಳಿ, ತಾನು ಮಡುವೆಯಾದ ಡಚ್ ಮಹಿಳೆಯೊಂದಿಗೆ ಉಗ್ರ ಸಂಘಟನೆ ಸೇರಿದ್ದ. ಯುಎಸ್ ನೇತೃತ್ವದ ಪಡೆಗೆ ಶರಣಾದ ನೂರಾರು ಉಗ್ರರಲ್ಲಿ ಆದಿಲ್ ಸಹ ಇದ್ದಾನೆ ಎಂದು ಆತನ ಪತ್ನಿ ಸಂದೇಶ ಕಳುಹಿಸಿದ್ದಾಳೆ ಎಂದು ತಿಳಿದುಬಂದಿದೆ.