ನವದೆಹಲಿ: ಎಲ್ಎಸಿ ಗಡಿಯಲ್ಲಿ ಭಾರತ ಯಾವುದೇ ರೀತಿಯಲ್ಲಿ ನಿಯಮ ಉಲ್ಲಂಘನೆ ಮಾಡಿಲ್ಲ. ಸೇನೆ ಹಿಂಪಡೆಯಲು ಹಾಗೂ ಪರಿಸ್ಥಿತಿ ನಿಯಂತ್ರಣಕ್ಕೆ ಭಾರತ ಶ್ರಮಿಸುತ್ತಿದ್ದು, ಚೀನಾ ಭಾರತವನ್ನು ಪ್ರಚೋದಿಸಲು ಮುಂದಾಗುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ.
ಮಂಗಳವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಸೇನೆ, ಸೆಪ್ಟೆಂಬರ್ 7ರಂದು ಚೀನಾದ ಸೇನೆ ಎಲ್ಎಸಿ ಬಳಿ ಆಟಾಟೋಪ ತೋರಿತ್ತು. ಇದೇ ವೇಳೆ ಭಾರತೀಯ ಸೇನೆಯನ್ನು ಪ್ರಚೋದಿಸುವ ಸಲುವಾಗಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದ್ದು, ಆಕ್ರಮಣಕಾರಿಯಾಗಿ ನಡೆದುಕೊಂಡಿದೆ ಎಂದು ಸ್ಪಷ್ಟನೆ ನೀಡಿದೆ.
ಮಿಲಿಟರಿ, ರಾಜತಾಂತ್ರಿಕವಾಗಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಸಭೆಗಳು ನಡೆಯುತ್ತಿರುವ ವೇಳೆಯೇ ಚೀನಾ ಸೇನೆ ಒಪ್ಪಂದಗಳನ್ನು ಉಲ್ಲಂಘಿಸುತ್ತಿದೆ ಮತ್ತು ಆಕ್ರಮಣಕಾರಿ ತಂತ್ರಗಳನ್ನು ನಡೆಸುತ್ತಿದೆ.
ಚೀನಾ ಸೇನೆ ಗಂಭೀರವಾಗಿ ಪ್ರಚೋದನೆ ನೀಡಿದರೂ ಭಾರತೀಯ ಸೇನೆ ಸಂಯಮದಿಂದ ವರ್ತಿಸಿವೆ. ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಸೇನೆಯು ಅಧಿಕೃತ ಹೇಳಿಕೆಗೆ ಚೀನಾಗೆ ತಿರುಗೇಟು ನೀಡಿದೆ.