ಚಂಡೀಗಢ: ಪೋಸ್ಟ್ ಗ್ರ್ಯಾಜುಯೆಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ (PGIMER)ನ ವೈದ್ಯರ ತಂಡ 16 ತಿಂಗಳ ಮಗುವಿನ ಮದುಳಿನಲ್ಲಿದ್ದ ಗಡ್ಡೆ (ಬ್ರೈನ್ ಟ್ಯೂಮರ್)ಯನ್ನು ಮೂಗಿನ ಮೂಲಕ ಯಶಸ್ವಿಯಾಗಿ ಹೊರ ತೆಗೆದು ವೈದ್ಯ ಲೋಕದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ದೃಷ್ಟಿಯನ್ನು ಕಳೆದುಕೊಂಡಿದ್ದ ಮಗುವನ್ನು ಪಿಜಿಐಎಂಇಆರ್‌ಗೆ ಶಿಫಾರಸು ಮಾಡಲಾಗಿತ್ತು. ಸಾಮಾನ್ಯ ದೃಷ್ಟಿಹೊಂದಿದ್ದ ಮಗು ಕಳೆದ ಕೆಲವು ತಿಂಗಳ ಹಿಂದೆ ದೃಷ್ಟಿ ದೋಷ ಸಮಸ್ಯೆಗೆ ಒಳಗಾಗಿದ್ದಳು. ಬಳಿಕ ಈಕೆಗೆ ಏನೂ ಕಾಣುವುದಿಲ್ಲ ಎಂಬುದನ್ನು ಮಗುವಿನ ತಾಯಿ ಗುರುತಿಸಿದ್ದಳು.
ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಸ್ಕ್ಯಾನ್ ಮಾಡಿಸಿದಾಗ ತಲೆಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ನರ ತಜ್ಞ ವೈದ್ಯರ ವಿಭಾಗದ ಡಾ.ದಂಡಪಾಣಿ ಎಸ್‌ಎಸ್, ಡಾ.ಸುಶಾಂತ್ ಹಾಗೂ ಇಎನ್‌ಟಿ ವಿಭಾಗದ ವೈದ್ಯ ಡಾ.ರಿಜುನೀತಾ ಅವರನ್ನೊಳಗೊಂಡ ತಂಡ ಬಾಲಕಿಯ ತಲೆಯಲ್ಲಿದ್ದ ಗಡ್ಡೆಯನ್ನು 6 ಗಂಟೆಗಳ ಸತತ ಶಸ್ತ್ರ ಚಿಕಿತ್ಸೆ ಮಾಡಿ ಮೂಗಿನ ಮೂಲಕ ಗಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ.
ಸಾಮಾನ್ಯವಾಗಿ ತಲೆಯಲ್ಲಿನ ಗಡ್ಡೆಯನ್ನು ಓಪನ್ ಸರ್ಜರಿ ಮೂಲಕ ಹೊರತೆಗೆಯಲಾಗುತ್ತದೆ. ಆದರೆ ಡಾ.ದಂಡಪಾಣಿ ನೇತೃತ್ವದ ವೈದ್ಯರ ತಂಡ ಎಂಡೋನಾಸಲ್ ಕಾರಿಡಾರ್ ಅನ್ನು ಆಯ್ಕೆ ಮಾಡಿಕೊಂಡು ಮೆದುಳಿಗೆ ಯಾವುದೇ ತೊಂದರೆ ಆಗದಂತೆ ಮೂಗಿನ ಮೂಲಕ ಗಡ್ಡೆಯನ್ನು ಹೊರ ತೆಗೆದಿದ್ದಾರೆ. 2019ರಲ್ಲಿ ಅಮೆರಿಕದ ಸ್ಟ್ಯಾನ್ಫೋರ್ಡ್‌ನಲ್ಲಿ 2 ವರ್ಷದ ಮಗುವಿಗೆ ಎಂಡೋಸ್ಕೋಪ್ ಸರ್ಜರಿ ಮಾಡಿ ಮೂಗಿನ ಮೂಲಕ ಗಡ್ಡೆಯನ್ನು ಹೊರ ತೆಗೆಯಲಾಗಿತ್ತು.