ನವದೆಹಲಿ : ಸತತ 21 ದಿನಗಳಿಂದ ಒಂದೇ ಸಮನೇ ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ನಿನ್ನೆಯೂ ಅಲ್ಪ ಏರಿಕೆ ಕಂಡಿದ್ದ ಇಂಧನ ಬೆಲೆಯಲ್ಲಿ ಇಂದೂ ಕೂಡಾ ಅಲ್ಪ ಏರಿಕೆ ಕಂಡಿದೆ.
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ಗೆ 25 ಪೈಸೆ ಹಾಗೂ ಡಿಸೇಲ್ನ ಬೆಲೆಯಲ್ಲಿ 21 ಪೈಸೆಯನ್ನು ಹೆಚ್ಚಿಸಿವೆ. ಪೆಟ್ರೋಲ್ನ ಬೆಲೆ ದೆಹಲಿಯಲ್ಲಿ ಲೀಟರ್ಗೆ 80.38 ರೂಪಾಯಿ ಹಾಗೂ ಡೀಸೆಲ್ಗೆ 80.40 ರೂಪಾಯಿಯಷ್ಟಿದೆ.
ಮಾರ್ಚ್ - ಏಪ್ರಿಲ್ನಲ್ಲಿ ಕಚ್ಚಾತೈಲ ಬೆಲೆ ಪಾತಾಳಕ್ಕಿಳಿದರೂ ದರ ಇಳಿಸುವ ಕ್ರಮಕ್ಕೆ ಮುಂದಾಗದ ತೈಲ ಕಂಪನಿಗಳು ಈಗ ಮಾತ್ರ ಗ್ರಾಹಕರ ಜೀವ ಹಿಂಡುತ್ತಿವೆ. ಅತ್ತ ಕೇಂದ್ರ ಸರ್ಕಾರ ಜನಪರ ಕಾಳಜಿ ಮರೆತು ಬಡ ವಾಹನ ಸವಾರರ ಮೇಲೆ ಸವಾರಿ ಮಾಡುತ್ತಿದೆ. ಇದು ಹೀಗೆ ಮುಂದುವರೆದರೆ ಹೇಗೆ ಎಂಬ ತಣ್ಣನೇ ಆಕ್ರೋಶ ದೇಶಾದ್ಯಂತ ನಿಧಾನವಾಗಿ ಏರಿಕೆ ಆಗುತ್ತಿದೆ.
ಈ ನಡುವೆ ಕಾಂಗ್ರೆಸ್ ಸೋಮವಾರ ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಧರಣಿ ನಡೆಸಲಿದೆ. ಈ ಸಂಬಂಧ ಇತ್ತೀಚೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಎಲ್ಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.