ನವದೆಹಲಿ: ಸೂರತ್ನ ಕೋಚಿಂಗ್ ಸೆಂಟರ್ನಲ್ಲಿ ಅಗ್ನಿ ದುರಂತ ಸಂಭವಿಸಿ, 22 ವಿದ್ಯಾರ್ಥಿಗಳು ದಾರುಣವಾಗಿ ಸಾವಿಗೀಡಾಗಿದ್ದು ಎಲ್ಲರನ್ನು ದುಃಖಕ್ಕೀಡು ಮಾಡಿತ್ತು. ಇದರ ಬೆನ್ನಲ್ಲೆ, ಖಾಸಗಿ ಕೋಚಿಂಗ್ ಸೆಂಟರ್ಗಳ ಅನಧಿಕೃತತೆ ಬಗ್ಗೆ ಚರ್ಚೆಯೂ ನಡೆಯಿತು.
ಇದೀಗ ವಕೀಲ ಪವನ್ ಪ್ರಕಾಶ್ ಪಾಠಕ್ ಎಂಬುವವರು, ಖಾಸಗಿ ಕೋಚಿಂಗ್ ಸೆಂಟರ್ಗಳಿಗೆ ರಾಜ್ಯ ಸರ್ಕಾರ ಒಂದಷ್ಟು ನಿಯಮಗಳನ್ನು ರೂಪಿಸಿಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದಾರೆ.
ಸೂರತ್ ದುರಂತವನ್ನು ನಿದರ್ಶನವಾಗಿಟ್ಟುಕೊಂಡು, ಖಾಸಗಿ ಕೋಚಿಂಗ್ ಸೆಂಟರ್ಗಳು ಕನಿಷ್ಠ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂಬ ನಿಯಮ ರೂಪಿಸಬೇಕು. ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕು. ಕೋಚಿಂಗ್ ಸೆಂಟರ್ಗಳಲ್ಲಿ ಅವರಿಗೆ ಎಲ್ಲ ರೀತಿಯ ಸುರಕ್ಷತೆ ದೊರೆಯಬೇಕೆಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಕೋಚಿಂಗ್ ಕ್ಲಾಸ್ ಪರ್ಯಾಯ ಶಿಕ್ಷಣ ವ್ಯವಸ್ಥೆಯಾಗಿದ್ದು, ಅವರು ಕನಿಷ್ಠ ಮಾನದಂಡಗಳನ್ನು ಅನುಸರಿಸಬೇಕಿದೆ. ಮೂಲಭೂತ ಸೌಲಭ್ಯ, ಶುಲ್ಕ, ಸುರಕ್ಷತಾ ಕ್ರಮಗಳು ಸೇರಿ ಮತ್ತಿತರ ನಿಯಮಗಳನ್ನು ಕೋಚಿಂಗ್ ಸೆಂಟರ್ಗಳು ಅಳವಡಿಸಿಕೊಳ್ಳಬೇಕು. ಆದರೆ, ಬಹುತೇಕ ಕೋಚಿಂಗ್ ಸೆಂಟರ್ಗಳು ಅನಧಿಕೃತವಾಗಿ ನಡೆಯುತ್ತಿರುವುದು ಸರಿಯಲ್ಲ ಎಂದು ಅವರು ವಾದಿಸಿದ್ದಾರೆ.