ಗುಂಟೂರು(ಆಂಧ್ರ ಪ್ರದೇಶ): ಕೊರೊನಾ ಸೋಂಕಿನಿಂದ ಮಹಿಳೆ ಸಾವನ್ನಪ್ಪಿದ್ದು, ಅಂತ್ಯಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಮೃತದೇಹವನ್ನು ಕರೆದೊಯ್ಯುವ ವೇಳೆ ಸಾರ್ವಜನಿಕರು ಆ್ಯಂಬುಲೆನ್ಸ್ ಮೇಲೆ ಕಲ್ಲು ತೂರಾಡಿ, ಅಡ್ಡಿಪಡಿಸಿದ ಘಟನೆ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಕರಿಕಲ್ ಮಂಡಲ್ ಮೂಲದ ಮಹಿಳೆ ಕೊರೊನಾ ಸೋಂಕಿನಿಂದ ಎನ್ಆರ್ಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಮೃತದೇಹವನ್ನು ಸ್ಥಂಬಲ ಚೆರುವಿನ ಸ್ಮಶಾನಕ್ಕೆ ಅಂತ್ಯಕ್ರಿಯೆ ನಡೆಸಲು ತೆಗೆದುಕೊಂದು ಬರಲಾಗಿತ್ತು. ಆದ್ರೆ ಈ ವೇಳೆ ಸಾರ್ವಜನಿಕರು ಆ್ಯಂಬುಲೆನ್ಸ್ ತಡೆದು ಕಲ್ಲು ತೂರಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತದೇಹ ತೆಗೆದುಕೊಂಡು ಹಿಂತಿರುಗಿ ಹೋಗಿದ್ದಾರೆ.
ಬಳಿಕ ಪೊಲೀಸರ ಸಹಕಾರದೊಂದಿಗೆ ಸ್ಮಶಾನದ ಬಳಿ ಬಂದಾಗ ಮತ್ತೆ ಸಾರ್ವಜನಿಕರು ತಡೆದಿದ್ದಾರೆ. ಸಿಐ ಕಲ್ಯಾಣರಾಜು ಅವರು ಸಾರ್ವಜನಿಕರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದವೂ ನಡೆಯಿತು. ಬಳಿಕ ಲಾಠಿಚಾರ್ಜ್ ನಡೆಸುವುದಾಗಿ ಸಿಐ ಕಲ್ಯಾಣರಾಜು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರಿದ ಭಯದಿಂದ ಜನರು ಅಲ್ಲಿಂದ ಕಾಲ್ಕಿತ್ತರು.
ಅನೇಕ ಭಾಗಗಳಿಂದ ಮೃತದೇಹಗಳನ್ನು ಇಲ್ಲಿಗೆ ಅಂತ್ಯಕ್ರಿಯೆಗೆಂದು ತರುತ್ತಾರೆ. ಇದರಿಂದ ಕೊರೊನಾ ಹರಡುತ್ತದೆ ಎಂಬ ತಪ್ಪು ತಿಳುವಳಿಕೆ ಸ್ಥಳೀಯರಲ್ಲಿದೆ. ಸದ್ಯ, ಆ್ಯಂಬುಲೆನ್ಸ್ಗೆ ಹಾನಿಯುಂಟು ಮಾಡಿದ ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಿಐ ತಿಳಿಸಿದ್ದಾರೆ.