ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಅಕ್ಟೋಬರ್ 1ರವರೆಗೆ ನಡೆಯಲಿದೆ. ಈಗಾಗಲೇ ಆಡಳಿತರೂಢ ಬಿಜೆಪಿ ಸೇರಿ ಎಲ್ಲಾ ಪಕ್ಷಗಳು ತಂತ್ರ, ಪ್ರತಿತಂತ್ರವನ್ನು ರೂಪಿಸಿದ್ದು, ಯಾವ ರೀತಿಯ ಅಧಿವೇಶನ ನಡೆಯಲಿದೆ ಎಂಬುದು ಎಲ್ಲರನ್ನೂ ಕುತೂಹಲದಲ್ಲಿ ಇರಿಸಿದೆ.
ಕೊರೊನಾ ಕಾರಣಕ್ಕೆ ಸಂಸತ್ತಿನ ಅಧಿವೇಶನವನ್ನು ಎರಡು ಪಾಳಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಲೋಕಸಭೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ರಾಜ್ಯಸಭೆ ಕಲಾಪದ ಮಾದರಿಯಲ್ಲಿ ನಡೆಸಲಾಗುತ್ತದೆ.
ಅಧಿವೇಶನಲ್ಲಿ ಚರ್ಚೆ ನಡೆಯಬಹುದಾದ ವಿಷಯಗಳು..
- ಕೊರೊನಾ ಸೋಂಕು
- ಭಾರತ, ಚೀನಾ ಗಡಿ ಸಮಸ್ಯೆ
- ಆರ್ಥಿಕ ಸಮಸ್ಯೆಯಿಂದ ಜಿಡಿಪಿ ಕುಸಿತ
- ಉದ್ಯೋಗ ಕಡಿತ
- ಎಪಿಎಂಸಿ ಕಾಯ್ದೆ
- ಪ್ರಶ್ನೋತ್ತರ ಹಾಗೂ ಶೂನ್ಯ ವೇಳೆ ರದ್ದು ವಿಚಾರ
ಮಾರ್ಚ್ 23ರಂದು ಸಂಸತ್ ಅಧಿವೇಶನ ನಡೆದಿದ್ದು, ಸಂವಿಧಾನದ ಪ್ರಕಾರ ಇದಾದ ಆರು ತಿಂಗಳಲ್ಲಿ ಮತ್ತೊಂದು ಅಧಿವೇಶನ ನಡೆಸಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಇಂದಿನಿಂದ ಸಂಸತ್ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಅಧಿವೇಶನಕ್ಕಾಗಿ ಮುಂಚಿತವಾಗಿ ಸಾಂಪ್ರದಾಯಿಕವಾಗಿ ನಡೆಯುವ ಸರ್ವಪಕ್ಷ ಸಭೆ ರದ್ದಾಗಿತ್ತು. ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ವೇಳೆಯೂ ರದ್ದುಗೊಂಡಿರುವ ಕಾರಣ ಅಧಿವೇಶನ ಯಾವ ರೀತಿ ನಡೆಯಲಿದೆ ಎಂಬ ಕುತೂಹಲ ಮೂಡಿಸಿದೆ.