ಇಸ್ಲಾಮಾಬಾದ್ (ಪಾಕಿಸ್ತಾನ): 26ನೇ ನವೆಂಬರ್ 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ (ಎಫ್‌ಐಎ) ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದು, ದಾಳಿಗೆ ಸಹಕರಿಸಿದ 11 ಭಯೋತ್ಪಾದಕರ ಉಪಸ್ಥಿತಿಯನ್ನು ಒಪ್ಪಿಕೊಂಡಿದೆ.
ಫೆಡರಲ್ ತನಿಖಾ ಸಂಸ್ಥೆ 800 ಪುಟಗಳ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಯೋತ್ಪಾದಕ ದಾಳಿಗೆ ಸಹಕರಿಸಲು ದೋಣಿ ಅಲ್ಫೌಜ್ ಖರೀದಿಯಲ್ಲಿ ಭಾಗಿಯಾಗಿದ್ದ ಮುಲ್ತಾನ್ ಮೂಲದ ಮುಹಮದ್ ಅಮ್ಜದ್ ಖಾನ್ನನ್ನು ಗುರ್ತಿಸಲಾಗಿದೆ.
ಅಮ್ಜದ್ ಇದಕ್ಕೂ ಮೊದಲು ಕರಾಚಿಯಲ್ಲಿ ಯಮಹಾ ಮೋಟೋಆರ್ ಬೋಟ್ ಎಂಜಿನ್, ಲೈಫ್ ಜಾಕೆಟ್ಗಳು, ಗಾಳಿ ತುಂಬಬಹುದಾದ ಬೋಟ್ಗಳನ್ನು ಖರೀದಿಸಿದ್ದ ಎಂದು ತಿಳಿದು ಬಂದಿದೆ.
ಅಲ್-ಹುಸೇನಿ ಎಂಬ ದೋಣಿಯ ಕ್ಯಾಪ್ಟನ್ ಆಗಿದ್ದ ಬಹವಾಲ್ಪುರದ ಶಾಹಿದ್ ಗಫೂರ್ ಮತ್ತು ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬಳಸಿದ ದೋಣಿಗಳ ಒಂಬತ್ತು ಸಿಬ್ಬಂದಿಗಳನ್ನೂ ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಹೀವಾಲ್ ಜಿಲ್ಲೆಯ ಮುಹಮ್ಮದ್ ಉಸ್ಮಾನ್, ಲಾಹೋರ್ ಜಿಲ್ಲೆಯ ಅಟೆಕ್-ಉರ್-ರೆಹಮಾನ್, ಹಫೀಜಾಬಾದ್‌ನ ರಿಯಾಜ್ ಅಹ್ಮದ್, ಗುಜ್ರಾನ್‌ವಾಲಾ ಜಿಲ್ಲೆಯ ಮುಹಮ್ಮದ್ ಮುಷ್ತಾಕ್, ಡೇರಾ ಘಾಜಿ ಖಾನ್ ಜಿಲ್ಲೆಯ ಮುಹಮ್ಮದ್ ನಯೀಮ್, ಸರ್ಗೋಡ ಜಿಲ್ಲೆಯ ಅಬ್ದುಲ್ ಶಕೂರ್, ಮುಲ್ತಾನ್ನ ಮುಹಮ್ಮದ್ ಸಬೀರ್, ಲೋದ್ರಾನ್ ಜಿಲ್ಲೆಯ ಮುಹಮ್ಮದ್ ಉಸ್ಮಾನ್, ರಹೀಂ ಯಾರ್ ಖಾನ್ ಜಿಲ್ಲೆಯ ಶಕೀಲ್ ಅಹ್ಮದ್ ಎಂದು ಭಯೋತ್ಪಾದಕರನ್ನು ಗುರ್ತಿಸಲಾಗಿದೆ.
ಈ ಮೇಲೆ ಪಟ್ಟಿ ಮಾಡಿದ ಎಲ್ಲರೂ ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಲಷ್ಕರ್ ಇ ತೋಯ್ಬಾ ಭಯೋತ್ಪಾದನಾ ಸಂಘಟನೆಗೆ ಸೇರಿದವರು ಎಂದು ಎಫ್‌ಐಎ ಹೇಳಿದೆ. ಈ ಪಟ್ಟಿಯಲ್ಲಿ 1210 ಕುಖ್ಯಾತ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಉಲ್ಲೇಖಿಸಲಾಗಿದೆ ಆದರೆ ಹಫೀಜ್ ಸಯೀದ್, ಮಸೂದ್ ಅಜರ್, ಅಥವಾ ದಾವೂದ್ ಇಬ್ರಾಹಿಂ ಬಗ್ಗೆ ಯಾವುದೇ ಉಲ್ಲೇಖವಿಲ್ಲ.