ಪೂಂಚ್: ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಗುಂಡಿನ ದಾಳಿ ನಡೆಸಿವೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಬೆಳಗ್ಗೆ 9.15ರ ಸುಮಾರಿಗೆ ಶಹಪುರ್, ಕಿರ್ನಿ ಮತ್ತು ದೇಗ್ವಾರ್ ವಲಯಗಳಲ್ಲಿ ಗಡಿಯುದ್ದಕ್ಕೂ ಗುಂಡಿನ ದಾಳಿ ಮತ್ತು ಶೆಲ್ ದಾಳಿ ಪ್ರಾರಂಭವಾಯಿತು. ಗಡಿ ರೇಖೆಯಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೇನಾ ಸಿಬ್ಬಂದಿ ಗಡಿಯಾಚೆಗಿನ ದಾಳಿಗೆ ಬಲವಾದ ಮತ್ತು ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ಗುಂಡಿನ ದಾಳಿ ಮುಮದುವರೆದಿದ್ದು, ಭಾರತದ ಕಡೆಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನವು ಬುಧವಾರ ಪೂಂಚ್ ಜಿಲ್ಲೆಯ ಕಿರ್ನಿ ಮತ್ತು ಕಸ್ಬಾ ವಲಯಗಳಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಅದೇ ದಿನ, ರಾಜೌರಿಯ ಕೆರಿ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಯಲ್ಲಿ ಸೇನೆಯ ಜೆಸಿಒ (ಜೂನಿಯರ್ ಕಮಿಷನ್ಡ್ ಆಫೀಸರ್) ಪ್ರಾಣ ಕಳೆದುಕೊಂಡಿದ್ದರು.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆಯ ಸಂದರ್ಭದಲ್ಲಿ ಪಂಜಾಬ್‌ನ ಅಮೃತಸರ ನಿವಾಸಿ ಜೆಸಿಒ ರಾಜ್‌ವಿಂದರ್ ಸಿಂಗ್ ಭಾನುವಾರ ಪ್ರಾಣ ಕಳೆದುಕೊಂಡಿದ್ದರು. ಪಾಕಿಸ್ತಾನವು ಈ ವರ್ಷ 2,730ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, 24 ನಾಗರಿಕರು ಸಾವನ್ನಪ್ಪಿದ್ದಾರೆ.