ಜಮ್ಮು: ಕಳೆದ ಏಳು ದಿನಗಳಲ್ಲಿ 95,000 ಕ್ಕೂ ಹೆಚ್ಚಿನ ಯಾತ್ರಿಕರು ಅಮರನಾಥನ ದರ್ಶನಕ್ಕೆ ಆಗಮಿಸಿದ್ದಾರೆ. ಆದರೆ, ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆಯ ಕಾರಣಕ್ಕೆ ಸೋಮವಾರ ಯಾವುದೇ ಹೊಸ ಯಾತ್ರಾರ್ಥಿಗಳನ್ನು ಇಲ್ಲಿಂದ ಹೊರಡಲು ಅನುಮತಿ ನೀಡಿಲ್ಲ.
ಇಂದಿಗೆ ಉಗ್ರ, ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಮೃತಪಟ್ಟು ಮೂರು ವರ್ಷಗಳಾಗಿದ್ದು, ಈ ಹಿನ್ನೆಲೆ ಪ್ರತ್ಯೇಕತವಾದಿಗಳು ಆತನ ಮೂರನೇ ವರ್ಷದ ಪುಣ್ಯತಿಥಿ ಆಚರಿಸುತ್ತಿದ್ದು, ಈ ಕಾರಣಕ್ಕೆ ಕಾಶ್ಮೀರ ಕಣಿವೆ ಬಂದ್ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಅಮರನಾಥ ಯಾತ್ರೆ ಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.
ಜುಲೈ 1 ರಂದು ಅಮರನಾಥ ಯಾತ್ರೆ ಪ್ರಾರಂಭವಾದಾಗಿದ್ದು, 95,923 ಯಾತ್ರಿಗಳು ಈಗಾಗಲೇ ಪವಿತ್ರ ಗುಹೆಗೆ ಭೇಟಿ ನೀಡಿದ್ದಾರೆ. 45 ದಿನಗಳ ಕಾಲ ನಡೆಯುವ ಈ ಪ್ರಯಾಣವು ಆಗಸ್ಟ್ 15 ರಂದು ಶ್ರಾವಣ ಪೂರ್ಣಿಮೆಯೊಂದಿಗೆ ಕೊನೆಗೊಳ್ಳಲಿದೆ. ಈ ಪವಿತ್ರ ಗುಹೆ, ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಒಂದು ದಿನದ ಮಟ್ಟಿಗೆ ಮಾತ್ರ ಯಾತ್ರೆ ಸ್ಥಗಿತಗೊಂಡಿದ್ದು, ಮಂಗಳವಾರದಿಂದ ಯಥಾಸ್ಥಿತಿಯಂತೆ ಯಾತ್ರೆ ಮುಂದುವರೆಯಲಿದೆ.