ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲಾಗಿರುವ 97 ಮಂದಿ ಕೋವಿಡ್-19 ಸೋಂಕಿತರ ಪೈಕಿ 24 ಮಂದಿ ನಿಜಾಮುದ್ದೀನ್‌ನ ಮುರ್ಕಜ್ ಪ್ರದೇಶದವರೇ ಆಗಿದ್ದಾರೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಒಟ್ಟು ಸೋಂಕಿತರ ಪೈಕಿ 41 ಮಂದಿ ವಿದೇಶದಿಂದ ಬಂದವರಾಗಿದ್ದು, 22 ಮಂದಿ ಇವರ ಕುಟುಂಬದ ಸದಸ್ಯರಾಗಿದ್ದಾರೆ. 10 ಜನರಿಗೆ ಯಾರಿಂದ ಸೋಂಕು ಹರಡಿದೆ ಎಂಬುದು ಇನ್ನೂ ಖಚಿತವಾಗಿಲ್ಲ ಅಂತ ಮಾಹಿತಿ ನೀಡಿದ್ದಾರೆ.
ನಿಜಾಮುದ್ದೀನ್‌ನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದ ಬಗ್ಗೆ FIR ದಾಖಲಿಸುವ ಸಂಬಂಧ ಲೆಫ್ಟಿನೆಂಟ್ ಗವರ್ನರ್‌ಗೆ ದೆಹಲಿ ಸರ್ಕಾರ ಪತ್ರ ಬರೆದಿದೆ. ಗವರ್ನರ್ ಶೀಘ್ರವೇ ಅನುಮತಿ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದಾಗಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.
ಈವರೆಗೆ 1 ಸಾವಿರದ 548 ಮಂದಿಯನ್ನು ಮುರ್ಕಜ್‌ನಿಂದ ಹೊರಗೆ ಕರೆ ತರಲಾಗಿದೆ. 441 ಮಂದಿಯಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿವೆ. ಇವರನ್ನೆಲ್ಲಾ ಆಸ್ಪತ್ರೆಗೆ ವರ್ಗಾಯಿಸಿ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಲಾಗುತ್ತಿದೆ. 1 ಸಾವಿರದ 107 ಮಂದಿಗೆ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ಅವರನ್ನೆಲ್ಲಾ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.