ನವದೆಹಲಿ: ಕೊರೊನಾ ಹೊಡೆದೋಡಿಸುವ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸ್ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಹೀಗೆ ಕರ್ತವ್ಯ ನಿರತರಾಗಿರುವಾಗ ಅವರಿಗೇ ಕೊರೊನಾ ಸೋಂಕು ತಗುಲಿದಾಗ ಮಾತ್ರ ಅವರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇಂಥದೊಂದು ಘಟನೆ ರಾಜಧಾನಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ನಡೆದಿದೆ.
ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದಾಗ ಅವರೊಂದಿಗೆ ಏಮ್ಸ್ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಸಿಬ್ಬಂದಿ ಆರೋಪಿಸುತ್ತಿದ್ದಾರೆ. ಇಲ್ಲಿನ ಓಟಿ ಟೆಕ್ನಿಶಿಯನ್ಗಳಿಗೆ ಕೊರೊನಾ ಪಾಸಿಟಿವ್ ಆದಾಗ ಅಂಥವರಿಗೆ ಯಾವುದೇ ಚಿಕಿತ್ಸೆ ನೀಡದೆ ತಕ್ಷಣ ಹೊರ ಹಾಕಲಾಗುತ್ತಿದೆ ಎಂದು ಸಿಬ್ಬಂದಿ ದೂರುತ್ತಿದ್ದಾರೆ.
ಕೊರೊನಾ ಪೀಡಿತನಾಗಿರುವ ಏಮ್ಸ್ ಸಿಬ್ಬಂದಿಯೊಬ್ಬ ಆ್ಯಂಬುಲನ್ಸ್ಗಾಗಿ ಏಮ್ಸ್ ಮುಂದೆ 11 ಗಂಟೆಗಳ ಕಾಲ ಕಾಯುತ್ತಿರುವುದನ್ನು ಇಲ್ಲಿನ ನರ್ಸಿಂಗ್ ಸಿಬ್ಬಂದಿಯೋರ್ವರು ವಿಡಿಯೋ ಮಾಡಿ ಆಸ್ಪತ್ರೆಯ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ಏಮ್ಸ್ ಹೊರ ಆವರಣದಿಂದ ಆತನನ್ನು ವಾರ್ಡ್ ಒಳಗೆ ಕರೆದೊಯ್ಯಲು ಯಾರೊಬ್ಬರೂ ಬರುತ್ತಿಲ್ಲ. ಅಲ್ಲದೆ ಆಡಳಿತ ಮಂಡಳಿಯ ಯಾರೂ ಒಂದು ಫೋನ್ ಕರೆ ಮಾಡಿ ಸಹ ವಿಚಾರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಇಲ್ಲಿ ನೋಡಲ್ ಅಧಿಕಾರಿಯಾಗಿರುವ ಜಮಶೇದ್ ನಯ್ಯರ್ ಅವರೂ ಸಹ ಈ ಕಡೆ ಯಾವುದೇ ಗಮನ ಹರಿಸುತ್ತಿಲ್ಲ. ಸೋಂಕಿತ ಸಿಬ್ಬಂದಿಯನ್ನು ಆಸ್ಪತ್ರೆಗೆ ಸೇರಿಸಿಕೊಂಡು ಚಿಕಿತ್ಸೆ ನೀಡುವ ಬಗ್ಗೆಯೂ ಯಾವುದೇ ನಿರ್ಧಾರ ಕೈಗೊಳ್ಳಲಾಗುತ್ತಿಲ್ಲ ಎನ್ನಲಾಗಿದೆ.
ತನ್ನ ಸ್ವಂತ ಸಿಬ್ಬಂದಿಯೊಂದಿಗೇ ಇಷ್ಟು ಕೆಟ್ಟದಾಗಿ ನಡೆದುಕೊಳ್ಳುವ ಏಮ್ಸ್, ಹೊರಗಿನ ರೋಗಿಗಳೊಂದಿಗೆ ಇನ್ನೆಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿರಬಾರದು ಎಂಬ ಪ್ರಶ್ನೆಗಳು ಈ ಘಟನೆಯ ನಂತರ ಮೂಡಿವೆ. ಇನ್ನು ಇದೇ ರೀತಿ ಸಿಬ್ಬಂದಿ, ಜನ ಸೋಂಕಿತರಾಗುತ್ತ ಹೋದಲ್ಲಿ ಜನರಿಗೆ ಚಿಕಿತ್ಸೆ ನೀಡುವವರಾರು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.
ಏಮ್ಸ್ ನಿರ್ದೇಶಕರೊಬ್ಬರ ಹಟಮಾರಿ ಧೋರಣೆಯಿಂದಲೇ ಸಿಬ್ಬಂದಿಗೆ ಇಷ್ಟೆಲ್ಲಾ ಸಮಸ್ಯೆಗಳಾಗುತ್ತಿವೆ ಎಂದು ಹೆಸರು ಹೇಳಲಿಚ್ಛಿಸದ ನರ್ಸಿಂಗ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಇಲ್ಲಿನ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದಾಗ ಅವರಿಗೆ ಆ್ಯಂಬುಲನ್ಸ್ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಸೇರಿಸಿ ಎಂಬುದಷ್ಟೇ ನಮ್ಮ ಬೇಡಿಕೆಯಾಗಿದೆ. ಇದನ್ನು ಮಾಡುವುದು ಅವರ ಕಾರ್ಯವ್ಯಾಪ್ತಿಯಲ್ಲೇ ಬರುತ್ತದೆ. ಆದರೂ ಕೋವಿಡ್ ವಾರಿಯರ್ಸ್ ಬಗ್ಗೆ ಅವರು ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.