ಚೆನ್ನೈ (ತಮಿಳುನಾಡು): ಇಂಡಿಗೋ ವಿಮಾನ ಸ್ವಚ್ಛ ಮಾಡುತ್ತಿದ್ದ ಸಿಬ್ಬಂದಿಗೆ 50 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನ ಸಿಕ್ಕಿದೆ.
ದುಬೈನಿಂದ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಬೆಳಗ್ಗೆ ಬಂದಿಳಿದ ವಿಮಾನವನ್ನು ಅಲ್ಲಿನ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾಗ ಈ ಪ್ರಮಾಣದ ಚಿನ್ನ ದೊರೆತಿದೆ. ಎಂದಿನಂತೆ ಪ್ರಯಾಣಿಕರು ವಿಮಾನದಿಂದ ಕೆಳಗಿಳಿದು ತೆರಳಿದಾಗ ಅಲ್ಲಿನ ಸಿಬ್ಬಂದಿ ಸ್ವಚ್ಛಗೊಳಿತ್ತಿದ್ದರು. ಆಸನದ ಕೆಳಗೆ ಪಾರ್ಸಲ್ ವಸ್ತು ಕಂಡು ಸಿಬ್ಬಂದಿ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ 50 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನ ಇರುವುದು ಗೊತ್ತಾಗಿದೆ.
ಇದನ್ನೂ ಓದಿ : ಮಾರಕಾಸ್ತ್ರ ಹಿಡಿದು ದರೋಡೆಗೆ ಸಜ್ಜಾಗಿದ್ದವರ ಪ್ಲಾನ್ ವಿಫಲಗೊಳಿಸಿದ ಸಿಸಿಬಿ
ಅನುಮಾನ ವ್ಯಕ್ತವಾಗಿದ್ದರಿಂದ ದುಬೈನಿಂದ ಆಗಮಿಸಿದ್ದ ಪ್ರಯಾಣಿಕರ ಪರಿಶೀಲನೆಗೆ ಮುಂದಾದ ಕಸ್ಟಮ್ಸ್ ಅಧಿಕಾರಿಗಳಿಗೆ ಮತ್ತೆ 10 ಲಕ್ಷ ಮೌಲ್ಯದ 200 ಗ್ರಾಂ ಚಿನ್ನ ಸಿಕ್ಕಿದೆ. ವೆಲ್ಲೂರು ಮೂಲದ ಪ್ರಯಾಣಿಕ ವಿವೇಕ್ ಮನೋಕಾರನ್ ಎಂಬಾತ ತನ್ನ ಬೂಟುಗಳಲ್ಲಿ ಚಿನ್ನವನ್ನು ಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆತನಿಂದ ಚಿನ್ನ ವಶಪಡಿಸಿಕೊಂಡ ಅಧಿಕಾರಿಗಳು, ಆತನನ್ನು ಬಂಧಿಸಿದ್ದಾರೆ. ವಿಮಾನದ ಸೀಟಿನ ಕೆಳಗೆ ಚಿನ್ನ ಇಟ್ಟು ಹೋದ ವ್ಯಕ್ತಿಗಾಗಿ ಶೋಧನೆ ನಡೆಸಿದ್ದಾರೆ.