ಕಟಕ್ (ಒಡಿಶಾ): ಈ ವರ್ಷದ ಮೆಟ್ರಿಕ್ಯುಲೇಷನ್ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಸರ್ಕಾರದಿಂದ ನಿಯೋಜಿಸಲಾದ ಶಿಕ್ಷಕರಿಗೆ, ತಲಾ 50 ಲಕ್ಷ ರೂಗಳ ವಿಮೆ ನೀಡಬೇಕು ಎಂದು ಒಡಿಶಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ (ಒಎಸ್‌ಟಿಎ) ಆಗ್ರಹಿಸಿದೆ.
ಮೇ 20 ರಿಂದ ಮೌಲ್ಯಮಾಪನ ಪ್ರಕ್ರಿಯೆ ಪುನಾರಂಭಿಸುವ ಮೊದಲು ರಾಜ್ಯ ಸರ್ಕಾರವು, ಈ ವಿಮಾ ರಕ್ಷಣೆ ಪ್ರಕಟಿಸಬೇಕು ಎಂದು ಒಎಸ್‍ಟಿಎ ಕಾರ್ಯದರ್ಶಿ ಪ್ರಕಾಶ್ ಮೊಹಂತಿ ಹೇಳಿದ್ದಾರೆ.
ಈ ವಿಮೆ ಜೊತೆಗೆ, ಪ್ರಸ್ತುತ ರಾಜ್ಯಾದ್ಯಂತ ಕೇವಲ 60 ಮೌಲ್ಯಮಾಪನ ಕೇಂದ್ರಗಳಿದ್ದು, ಮೌಲ್ಯಮಾಪನ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಒಎಸ್‌ಎಸ್‌ಟಿಎ ಒತ್ತಾಯಿಸಿದೆ.
ಲಾಕ್‌ಡೌನ್ ಮಧ್ಯೆ ಶಿಕ್ಷಕರು ಮೌಲ್ಯಮಾಪನ ಕೇಂದ್ರಗಳಿಗೆ ಪ್ರಯಾಣಿಸಲು ಸಹಾಯ ಮಾಡುವ ಸಲುವಾಗಿ, ರಾಜ್ಯದ 314 ಬ್ಲಾಕ್‌ಗಳಲ್ಲಿ ಮೌಲ್ಯಮಾಪನ ಕೇಂದ್ರವನ್ನು ತೆರೆಯಬೇಕು ಎಂದು ಮೊಹಂತಿ ಇದೇ ವೇಳೆ ಆಗ್ರಹಿಸಿದ್ದಾರೆ.