ಬೆರ್ಹಾಂಪುರ (ಒಡಿಶಾ): ಬೆರ್ಹಾಂಪುರದ ಉದ್ಯಮಿಯೊಬ್ಬರ ಮನೆಯಿಂದ ಕದ್ದಿದ್ದ 6.5 ಕೆಜಿ ತೂಕದ ಚಿನ್ನಾಭರಣಗಳು ಮತ್ತು 4.44 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಒಡಿಶಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಗಂಜಾಂ ಜಿಲ್ಲೆಯಲ್ಲಿ 15 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯ ಪ್ರಮುಖ ಆರೋಪಿಯನ್ನು ಘನಶ್ಯಾಮ್ ಬೆಹೆರಾ ಅಲಿಯಾಸ್ ಕಾಲಿಯಾ (30) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 12 ಮತ್ತು 13 ರ ಮಧ್ಯರಾತ್ರಿಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮ ಮನೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಗಂಜಾಂ ಜಿಲ್ಲೆಯ ಪುರುಷೋತ್ತಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಂಗುಡಿಯಾಫಾದರ್ನ ಸುರೇಂದ್ರ ಕುಮಾರ್ ನಾಯಕ್ ಅಕ್ಟೋಬರ್ 13 ರಂದು ದೂರು ನೀಡಿದ್ದರು.
ಆರೋಪಿಗಳು ಟೆರೇಸ್ ಮೇಲಿನ ಬಾಗಿಲು ತೆರೆದು ಮರದ ಅಲ್ಮೆರಾವನ್ನು ಒಡೆಯುವ ಮೂಲಕ ಒಂದು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದ ಆಭರಣಗಳ ಜೊತೆ ಸಿಸಿಟಿವಿಯ ಡಿವಿಆರ್, ಸ್ಟೆಬಿಲೈಜರ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಕದ್ದೊಯ್ದಿರುವ ಬಗ್ಗೆ ದೂರು ನೀಡಿದ್ದರು.
ಮಾಸ್ಟರ್ ಮೈಂಡ್ ಕಾಲಿಯಾ, ಉದ್ಯಮಿಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಮಿತ್ ಬೆಹೆರಾ ಅವರಿಂದ ಚಿನ್ನಾಭರಣಗಳು ಮತ್ತು ಮನೆಯ ಪ್ರವೇಶ ದ್ವಾರದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಮಾಹಿತಿ ಸಂಗ್ರಹಿಸಿದ ನಂತರ, ಅವರು ಇತರ ಆರೋಪಿಗಳನ್ನು ಸಂಪರ್ಕಿಸಿ, ಒಂದು ಯೋಜನೆಯನ್ನು ರೂಪಿಸಿ ದರೋಡೆಗೆ ಮೂರು ಬಾರಿ ಪ್ರಯತ್ನಿಸಿದರು. ಆದರೆ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಅಕ್ಟೋಬರ್ 12 ರಂದು ಅವರು ಟೆರೇಸ್‌ನ ಬಾಗಿಲು ತೆರೆಯುವ ಮೂಲಕ ಮನೆಗೆ ಪ್ರವೇಶಿಸಲು ಯಶಸ್ವಿಯಾದರು'' ಎಂದು ಪೊಲೀಸರು ವಿವರಿಸಿದ್ದಾರೆ
ತನಿಖೆಯ ವೇಳೆ, ಕಾಲಿಯಾ ಮತ್ತು ಆತನ ಮಿತ್ರರು ಈ ಅಪರಾಧಕ್ಕೆ ಸಂಚು ರೂಪಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. 6.5 ಕೆಜಿ ತೂಕದ ಕದ್ದ ಚಿನ್ನದ ಆಭರಣಗಳು, 4,44,500 ರೂ. ನಗದು, ಸಿಸಿಟಿವಿಯ ಡಿವಿಆರ್, ಮತ್ತು ಸ್ಟೆಬಿಲೈಜರ್, ಒಂದು ಮೊಬೈಲ್ ಫೋನ್, ಬಾಗಿಲು ಮುರಿಯಲು ಬಳಸಿದ್ದ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.