ಪುರಿ (ಒಡಿಶಾ): ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪುರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಶ್ರೀ ಜಗನ್ನಾಥ್ ಸ್ವಾಮಿಯ ಹೆಸರಿನಲ್ಲಿ ಪುರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವಂತೆ ಪತ್ರದಲ್ಲಿ ಪಟ್ನಾಯಕ್ ಮನವಿ ಮಾಡಿದ್ದಾರೆ. ಯಾತ್ರಿಕ ಪಟ್ಟಣದಲ್ಲಿ ಈಗಾಗಲೇ ಭೂಮಿಯನ್ನು ಗುರುತಿಸಲಾಗಿದೆ ಎಂದು ಪ್ರಸ್ತಾಪಿಸಿರುವ ಸಿಎಂ, ವಿಮಾನ ನಿಲ್ದಾಣ ಸ್ಥಾಪನೆಗೆ ಬೇಕಾದ ಎಲ್ಲಾ ಚಟುವಟಿಕೆಗಳನ್ನು ರಾಜ್ಯ ಸರ್ಕಾರ ಪೂರ್ವಭಾವಿಯಾಗಿ ಒದಗಿಸುತ್ತದೆ ಎಂದು ಹೇಳಿದ್ದಾರೆ.
ಈ ಉದ್ದೇಶಿತ ವಿಮಾನ ನಿಲ್ದಾಣವನ್ನು ಆದ್ಯತೆಯ ಯೋಜನೆಯಾಗಿ ತೆಗೆದುಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರಧಾನಮಂತ್ರಿಯನ್ನು ಸಿಎಂ ಕೋರಿದ್ದಾರೆ. ಹಿಂದೂ ಧರ್ಮದ ನಾಲ್ಕು ಧಾಮಗಳಲ್ಲಿ ಭಗವಾನ್ ಜಗನ್ನಾಥನ ವಾಸಸ್ಥಾನವಾದ ಪುರಿ ನಗರವೂ ಪ್ರಮುಖ. ಶತಮಾನಗಳಷ್ಟು ಹಳೆಯದಾದ ಈ ದೇವಾಲಯಕ್ಕೆ ಪ್ರಪಂಚದಾದ್ಯಂತ ಇರುವ ಹಿಂದೂಗಳು ಭೇಟಿ ನೀಡುತ್ತಾರೆ.
ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾದ ಕೊನಾರ್ಕ್‌ನ ಸೂರ್ಯ ದೇವಾಲಯವು ಪುರಿಯಿಂದ ಕೇವಲ 35 ಕಿ.ಮೀ ದೂರದಲ್ಲಿದೆ. ಹಾಗೆ ಪಕ್ಕದ ರಾಮಚಂಡಿ-ಚಂದ್ರಭಾಗ ಕಡಲತೀರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪುರಿಯ ರಥಯಾತ್ರೆ ವಿಶ್ವಪ್ರಸಿದ್ಧ ಕಾರ್ಯಕ್ರಮವಾಗಿದೆ. ಲಕ್ಷಾಂತರ ಯಾತ್ರಾರ್ಥಿಗಳು ಮತ್ತು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಹಿನ್ನೆಲೆ ಉದ್ದೇಶಿತ ವಿಮಾನ ನಿಲ್ದಾಣವು ಜಗನ್ನಾಥ ಭಕ್ತರನ್ನು ವಿಶ್ವದಾದ್ಯಂತ ಪುರಿಗೆ ಕರೆತರಲು ಸಹಾಯ ಮಾಡುತ್ತದೆ. ಹಾಗೆ ಜಗನ್ನಾಥ ಸಂಸ್ಕೃತಿಯನ್ನು ವಿಶ್ವದಾದ್ಯಂತ ಉತ್ತೇಜಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.