ನವದೆಹಲಿ: ವಿವಿಧ ಧರ್ಮಗಳಲ್ಲಿ, ಪುಣ್ಯಕ್ಷೇತ್ರಗಳಲ್ಲಿ ಮಹಿಳೆಯರಿಗಿರುವ ತಾರತಮ್ಯವನ್ನು ಬಗೆಹರಿಸಲು ಸುಪ್ರೀಂಕೋರ್ಟ್ ಮುಂದಾಗಿದ್ದು, ಈ ಸಂಬಂಧ ಸೋಮವಾರ ಮಹತ್ವದ ವಿಚಾರಣೆ ಪ್ರಾರಂಭಿಸಿದೆ. ನ್ಯಾಯಾಲಯವು ದೇವಸ್ಥಾನಕ್ಕೆ, ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಪ್ರವೇಶ ಕುರಿತಂತೆ ಚರ್ಚಿಸಬೇಕಾದ ಪ್ರಶ್ನೆಗಳನ್ನು ರೂಪಿಸಲು ಪ್ರಾರಂಭಿಸಿದೆ. ಆದರೆ, ಇದು ಕೇವಲ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಾದ ಚರ್ಚೆಯಲ್ಲ ಎಂದು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ನ್ಯಾಯಪೀಠದ ಎದುರು ಪ್ರಖ್ಯಾತ ನ್ಯಾಯವಾದಿ ಎಫ್. ಎಸ್. ನಾರಿಮನ್ ಸೇರಿದಂತೆ ಹಲವಾರು ಹಿರಿಯ ವಕೀಲರು ತಮ್ಮ ವಾದಗಳನ್ನು ಮಂಡನೆ ಮಾಡುತ್ತಿದ್ದಾರೆ.
ಕಳೆದ ವರ್ಷ ನವೆಂಬರ್ 14 ರಂದು ಶಬರಿಮಲೆ ಪ್ರಕರಣದಲ್ಲಿ ನೀಡಿದ ತೀರ್ಪಿನ ನಂತರ, ಈ ತೀರ್ಪು ಪ್ರಶ್ನಿಸಿ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಈ ಸಂಬಂಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣಗೆ ವಿಶೇಷ 9 ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ರಚನೆ ಮಾಡುವ ನಿರ್ಣಯ ಕೈಗೊಂಡಿತ್ತು. ವಿವಿಧ ಧರ್ಮಗಳಲ್ಲಿ ಮಹಿಳೆಯರ ಮೇಲಿನ ತಾರತಮ್ಯಕ್ಕೆ ಸಂಬಂಧಿಸಿದಂತೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ತೀರ್ಮಾನ ಮಾಡಿತ್ತು.
ಎರಡು ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರ ಪ್ರವೇಶ, ದಾವೂಡಿ ಬೋಹ್ರಾ ಮುಸ್ಲಿಂ ಸಮುದಾಯದಲ್ಲಿ ಸ್ತ್ರೀ ಗುಪ್ತಾಂಗ ಊನಗೊಳಿಸುವಿಕೆ, ತಮ್ಮ ಧರ್ಮ ಬಿಟ್ಟು ಬೇರೆ ಧರ್ಮೀಯರನ್ನು ವಿವಾಹವಾದ ಪಾರ್ಸಿ ಮಹಿಳೆಯರಿಗೆ ಹಕ್ಕು ನಿರಾಕರಿಸುವುದಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳ ಹಿನ್ನೆಲೆಯನ್ನಿಟ್ಟುಕೊಂಡು ನ್ಯಾಯಾಲಯವು ಪ್ರಶ್ನೆಗಳನ್ನು ರೂಪಿಸಲಿದೆ.