ತಿರುವನಂತಪುರಂ (ಕೇರಳ): ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಗರ್ಭಿಣಿ ಆನೆಗೆ ಕೆಲ ಕಿಡಿಗೇಡಿಗಳು ಪಟಾಕಿ ತುಂಬಿದ್ದ ಅನಾನಸ್ ನೀಡಿದ್ದರಿಂದ ಆನೆಯ ಸಾವಿಗೀಡಾಗಿದೆ ಎಂಬ ವರದಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರಕುಮಾರ್ ತಳ್ಳಿಹಾಕಿದ್ದಾರೆ.
ಕೇರಳದ ಬಗ್ಗೆ ಅಪಚಾರ ಮಾಡುವ ಉದ್ದೇಶಪೂರ್ವಕ ಪ್ರಯತ್ನ ಇದಾಗಿದೆ ಎಂದು ರಾಜ್ಯದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆಗಿರುವ ಸುರೇಂದ್ರ ಕುಮಾರ್ ಹೇಳಿದ್ದಾರೆ.
'ಇದು ರಾಜ್ಯ ಮತ್ತು ರಾಜ್ಯದ ಜನರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪ್ರಾರಂಭಿಸಲಾದ ಅಭಿಯಾನವಾಗಿದೆ. ಪಟಾಕಿ ತುಂಬಿದ ಅನಾನಸ್ ತೆಗೆದುಕೊಂಡು ಆನೆಗೆ ಆಹಾರವನ್ನು ನೀಡಲು ಯಾರೂ ಧೈರ್ಯ ಮಾಡುವುದಿಲ್ಲ. ಆ ಕಥೆ ನಂಬಲಸಾಧ್ಯವಾದದ್ದು' ಎಂದು ಹೇಳಿದ್ದಾರೆ.
ಆನೆಯ ದವಡೆಯಲ್ಲಿ ಗಾಯವಾಗಿದೆ ಎಂದು ಅಧಿಕಾರಿ ಒಪ್ಪಿಕೊಂಡಿದ್ದಾರೆ. ಆಕಸ್ಮಿಕವಾಗಿ ಪಟಾಕಿ ತುಂಬಿದ್ದ ಕೆಲವು ತಿನ್ನಬಹುದಾದ ಆಹಾರವನ್ನು ಆನೆ ಸೇವಿಸಿರಬಹುದು. ಕಾಡು ಹಂದಿಗಳನ್ನು ಓಡಿಸಲು ರೈತರು ಆಹಾರ ಪದಾರ್ಥಗಳಲ್ಲಿ ಪಟಾಕಿ ಇಡುವ ಕಾನೂನು ಬಾಹಿರ ಕೃತ್ಯ ನಡೆಸುತ್ತಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ರಾಜ್ಯ ಅರಣ್ಯ ಇಲಾಖೆ ತಿಳಿಸಿದೆ. ಕೃತ್ಯದ ಹಿಂದೆ ಮೂವರು ವ್ಯಕ್ತಿಗಳಿದ್ದು, ಮತ್ತಿಬ್ಬರಿಗಾಗಿ ಶೋಧ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಇತರ ಇಬ್ಬರು ಆರೋಪಿಗಳನ್ನು ಬಂಧಿಸಿದ ನಂತರವೇ ಆನೆಯ ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿಯುತ್ತದೆ ಎಂದು ಸುರೇಂದ್ರಕುಮಾರ್ ಹೇಳಿದ್ದಾರೆ.