ನವದೆಹಲಿ: ಏರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ಜಾರಿಗೊಳಿಸಿದ್ದು, ಯಾವುದೇ ಕ್ಯಾಶುಯಲ್ ಉಡುಪುಗಳನ್ನು ಕಚೇರಿಯಲ್ಲಿ ಧರಿಸುವಂತಿಲ್ಲ. ಎಲ್ಲ ಸಿಬ್ಬಂದಿ ಸರಿಯಾದ ಉಡುಗೆಯೊಂದಿಗೆ ಹಾಜರಿರಬೇಕು. ಧರಿಸಿರುವ ಉಡುಪಿನಲ್ಲಿ ಪ್ರತ್ಯೇಕತೆ ಕಂಡು ಬಂದರೆ, ಮುಂದೆ ನೀವೇ ತೊಂದರೆ ಅನುಭವಿಸುತ್ತೀರಾ ಎಂದು ಎಚ್ಚರಿಸಿದೆ.
"ಉದ್ಯೋಗಿಗಳು ಟೀ ಶರ್ಟ್, ರಿಫ್ಟ್ ಜೀನ್ಸ್, ಫ್ಲಿಪ್ ಫ್ಲಾಪ್, ಶಾರ್ಟ್ಸ್ ಹಾಗೂ ಯಾವುದೇ ಇತರ ಕ್ಯಾಶುಯಲ್ ಉಡುಪುಗಳಲ್ಲಿ ಕಚೇರಿಗೆ ಹಾಜರಾಗಬಾರದು. ಪ್ರತಿಯೊಬ್ಬ ಉದ್ಯೋಗಿಯೂ ಕೂಡಾ ಏರ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿದ್ದೀರಾ, ಹಾಗಾಗಿ ನಿಮ್ಮ ವರ್ತನೆಯು ಕಂಪನಿಯ ಘನತೆಗೆ ಧಕ್ಕೆ ತರುವಂತೆ ಇರಬಾರದು", ಎಂದು ಏರ್ ಇಂಡಿಯಾ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಮಂಗಳವಾರ 'ಡ್ರೆಸ್ ಕೋಡ್' ಆದೇಶವನ್ನು ಹೊರಡಿಸಿದ, ಏರ್ ಇಂಡಿಯಾ, ಕಚೇರಿಯಲ್ಲಿ ಯಾವುದೇ ಸಮವಸ್ತ್ರವನ್ನು ನಿಗದಿಪಡಿಸಿಲ್ಲ. ಅದು ನೌಕರರ ಸ್ವಂತ ಉಡುಪಾಗಿರಬೇಕು. ಇನ್ನು ಶಾಶ್ವತ, ತಾತ್ಕಾಲಿಕ, ಒಪ್ಪಂದದ, ಅಪ್ರೆಂಟಿಸ್‌ಗಳು, ಪೂರ್ಣ ಸಮಯದ ನೌಕರರು, ಅರೆಕಾಲಿಕ, ಕ್ಯಾಶುಯಲ್, ಇಂಟರ್ನ್‌ಗಳು ಇತ್ಯಾದಿ ಎಲ್ಲ ವರ್ಗದ ನೌಕರರು ತಮ್ಮ ಶ್ರೇಣಿಗಳನ್ನು ಲೆಕ್ಕಿಸದೇ ಕೆಲಸದ ಸ್ಥಳಕ್ಕೆ ಸೂಕ್ತವಾದ ಬಟ್ಟೆಗಳಲ್ಲಿಯೇ ಹಾಜರಾಗಬೇಕು ಎಂದು ತಿಳಿಸಿದೆ.
"ಪುರುಷರು ಸರಿಯಾದ ಫಾರ್ಮಲ್ ಪ್ಯಾಂಟ್ ಮತ್ತು ಶರ್ಟ್ ಧರಿಸಬೇಕು ಹಾಗೂ ಮಹಿಳಾ ಉದ್ಯೋಗಿಗಳು ಭಾರತೀಯ ಶೈಲಿಯ ಅಥವಾ ಪಾಶ್ಚಿಮಾತ್ಯ ಶೈಲಿಯ ಫಾರ್ಮಲ್ ಉಡುಪನ್ನೇ ಧರಿಸಬೇಕು" ಎಂದು ಪತ್ರದಲ್ಲಿ ಹೇಳಲಾಗಿದೆ.
ಏರ್ ಇಂಡಿಯಾದ ಜನರಲ್ ಮ್ಯಾನೇಜರ್ ಸತ್ಯಾ ಸುಬ್ರಮಣಿಯನ್ ಅವರು ಸಹಿ ಮಾಡಿದ ಆದೇಶದಲ್ಲಿ, ನೌಕರರು ಎಲ್ಲ ಸಮಯದಲ್ಲೂ ಚೆನ್ನಾಗಿ ಕಾಣುವಂತಹ ಉಡುಪನ್ನು ಧರಿಸಬೇಕು, ವೃತ್ತಿಪರರಾಗಿರಬೇಕು ಹಾಗೂ ಟೀ ಶರ್ಟ್, ಪೋಲೋಸ್, ರಿಫ್ಟ್ ಜೀನ್ಸ್, ಚಪ್ಪಲಿ, ಸ್ಯಾಂಡಲ್ನಂತಹ ಕ್ಯಾಶುಯಲ್ ಬಟ್ಟೆಗಳನ್ನು ಧರಿಸಬಾರದು. ಜೀನ್ಸ್, ಫ್ಲಿಪ್ ಫ್ಲಾಪ್ಸ್, ತುಂಬಾ ಬಿಗಿಯಾದ, ಲೋ ಕಟ್, ಅಥವಾ ಪಾರದರ್ಶಕ ಬಟ್ಟೆಗಳನ್ನು ಧರಿಸಲು ಯಾವುದೇ ಅವಕಾಶಗಳಿಲ್ಲ. ಪ್ರತಿಯೊಬ್ಬರೂ ಬಟ್ಟೆಗಳನ್ನು ಚೆನ್ನಾಗಿ ಇಸ್ತ್ರಿ ಹಾಕಿ ಅಚ್ಚುಕಟ್ಟಾಗಿ ಧರಿಸಿ ಬರಬೇಕು ಎಂದಿದ್ದಾರೆ.
ಇನ್ನು ಶೇವಿಂಗ್, ಹೇರ್ ಕಟ್ಟಿಂಗ್ ಕೂಡಾ ಚೆನ್ನಾಗಿರಬೇಕು. ತಲೆಗೂದಲನ್ನು ಚೆನ್ನಾಗಿ ಬಾಚಿಕೊಂಡು, ಶುಭ್ರವಾಗಿ ಬರಬೇಕು ಕೆದರಿದ ಕೂದಲಿದ್ದು ಅಶಿಸ್ತು ಕಾಣಬಾರದು. ಅಲ್ಲದೇ, ಎಲ್ಲ ಉದ್ಯೋಗಿಗಳು ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕಾಗುತ್ತದೆ. ಸರಿಯಾದ ಉಡುಗೆ ಮತ್ತು ಅಂದವಾದ ನೋಟವನ್ನು ಕಾಪಾಡಿಕೊಳ್ಳುವಲ್ಲಿ ಪ್ರತಿ ಉದ್ಯೋಗಿಯೂ ಸರಿಯಾದ ನಿಲುವನ್ನು ಹೊಂದಿದ್ದಾರೆ ಎಂಬ ವಿಶ್ವಾಸ ನಮಗಿದೆ. ಆದಾಗ್ಯೂ ಯಾರಾದರೂ ಈ ಕ್ರಮ ಉಲ್ಲಂಘಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.