ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಪೂರ್ವ ಪ್ರಯಾಣದ ಭದ್ರತಾ ಪರಿಶೀಲನೆ (ಪಿಇಎಸ್ಸಿ) ಸಮಯದಲ್ಲಿ ಸಿಐಎಸ್ಎಫ್ ಸಿಬ್ಬಂದಿಯು ಪ್ರಯಾಣಿಕರ ಬೋರ್ಡಿಂಗ್ ಪಾಸ್ಅನ್ನು ಸ್ಟಾಂಪಿಂಗ್ ಮಾಡುವುದಿಲ್ಲ ಎಂದು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆಯು (ಬಿಸಿಎಎಸ್) ಬುಧವಾರ ತಿಳಿಸಿದೆ.
ದೆಹಲಿ, ಮುಂಬೈ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಿದ್ದ 13ಕ್ಕೂ ಹೆಚ್ಚು ಸಿಐಎಸ್ಎಫ್ ಸಿಬ್ಬಂದಿಗೆ ಕೊರೊನಾ ಸೋಕು ತಗುಲಿದೆ. ಬೋರ್ಡಿಂಗ್ ಪಾಸ್ ಪರಿಶೀಲನೆ ವೇಳೆ ಸ್ಪರ್ಶ/ಸಂಪರ್ಕದಿಂದ ಸೋಂಕು ಹರಡುವಿಕೆ ಸಾಧ್ಯತೆ ಹೆಚ್ಚಿದೆ. ಇದನ್ನು ನಿಯಂತ್ರಿಸಲು ಈ ಆದೇಶ ಹೊರಡಿಸಲಾಗಿದೆ ಎಂದು ಬಿಸಿಎಎಸ್ ಹೇಳಿದೆ.
ಪ್ರತಿ ವಿಮಾನ ನಿಲ್ದಾಣದ ಆಪರೇಟರ್ಸ್ ಪಿಇಎಸ್ಸಿ ಪ್ರದೇಶದಲ್ಲಿ ಬೋರ್ಡಿಂಗ್ ಸಮಯದಲ್ಲಿ ಪ್ರಯಾಣಿಕರ ಗುರುತು ದಾಖಲಿಸಲು ಸಿಸಿಟಿವಿ ಕ್ಯಾಮರಾಗಳು ಎತ್ತರದಲ್ಲಿ ಕಾರ್ಯನಿರ್ಹಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಮೂಲ ಸೌಕರ್ಯಗಳ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪರಿಶೀಲನೆ ಮಾಡಬೇಕು. ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾದ ಮಾಹಿತಿ 30 ದಿನಗಳವರೆಗೆ ಸಂರಕ್ಷಿಸಲಾಗುವುದು ಎಂದು ಅದು ಹೇಳಿದೆ.
ವಿಮಾನ ಏರುವ ಪ್ರಯಾಣಿಕರು ಕಡ್ಡಾಯವಾಗಿ 350 ಮಿ.ಲೀ. ಲಿಕ್ವಿಡ್ ಹ್ಯಾಂಡ್ ಸ್ಯಾನಿಟೈಸರ್ ಬಳಸಲು ಅನುಮತಿ ನೀಡಲಾಗಿದೆ. ಈ ಮೊದಲು 100 ಮಿ.ಲೀಟರ್ಗೆ ಅನುಮತಿ ಇತ್ತು. ಭಾರತದಲ್ಲಿ ಈವರೆಗೂ ಕೊರೊನಾ ಸೋಂಕಿತರ ಸಂಖ್ಯೆ 75,000 ದಾಟಿದ್ದು, 2,400ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ.