ಗಯಾ: ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಬಾಲಿವುಡ್ ನಟಿ ಕಂಗನಾ ರನೌತ್ ಅವರನ್ನು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಸ್ಟಾರ್ ಪ್ರಚಾರಕರಲ್ಲಿ ಒಬ್ಬರೆಂದು ಘೋಷಿಸಬಹುದು ಎಂಬ ಊಹಾಪೋಹಗಳನ್ನು ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡ್ನವಿಸ್ ತಳ್ಳಿಹಾಕಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊರೊನಾ ವಿರುದ್ಧ ಹೋರಾಡುವುದಕ್ಕಿಂತ ಕಂಗನಾ ವಿರುದ್ಧ ಹೋರಾಡಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಫಡ್ನವಿಸ್ ಕಿಡಿಕಾರಿದದ್ದಾರೆ.
ನಮಗೆ ಬೇರೆ ಸ್ಟಾರ್ ಪ್ರಚಾರಕರ ಅಗತ್ಯವಿಲ್ಲ, ಪ್ರಧಾನಿ ನರೇಂದ್ರ ಮೋದಿಯೇ ಅತಿದೊಡ್ಡ ಸ್ಟಾರ್ ಪ್ರಚಾರಕರು ಎಂದು ರಾಜ್ಯದ ಬಿಜೆಪಿಯ ಚುನಾವಣಾ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಫಡ್ನವೀಸ್ ಹೇಳಿದ್ದಾರೆ.
ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಗ್ಗೆ ಸಹಾನುಭೂತಿ ಹೊಂದಿರುವ ರನೌತ್ ಅವರು ಬಿಹಾರದಲ್ಲಿ ಆಡಳಿತಾರೂಢ ಒಕ್ಕೂಟ ಪರ ಪ್ರಚಾರ ಮಾಡಬಹುದು ಎಂಬ ಮಾಧ್ಯಮಗಳ ವರದಿಗಳನ್ನು ತಳ್ಳಿಹಾಕಿದ್ದಾರೆ.
ಶುಕ್ರವಾರದಿಂದ ಬಿಹಾರದಲ್ಲಿ ಪ್ರವಾಸ ಮಾಡುತ್ತಿರುವ ಫಡ್ನವೀಸ್, ಎನ್‌ಡಿಎಯಲ್ಲಿ ದೊಡ್ಡ ಅಥವಾ ಸಣ್ಣ ಸಹೋದರರು ಎಂಬ ಭಾವನೆ ಇಲ್ಲ. ಜೆಡಿಯು, ಬಿಜೆಪಿ ಮತ್ತು ಎಲ್‌ಜೆಪಿ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ದೊಡ್ಡ ಗೆಲುವು ಸಾಧಿಸಲಿವೆ ಎಂದಿದ್ದಾರೆ.