ಪಾಟ್ನಾ (ಬಿಹಾರ): ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳ ಬಗ್ಗೆ ಮಾತನಾಡಬೇಕು ಎಂದಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆ ಕಣದ ಬಿಸಿ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ನಿತೀಶ್‌ಕುಮಾರ್ ಇಂದು ರಾಜ್ಯದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ತೇಜಶ್ವಿ ಯಾದವ್ ಹಲವು ಪ್ರಶ್ನೆಗಳನ್ನು ಹಾಕಿದ್ದಾರೆ. ಬಿಹಾರ ಸರ್ಕಾರ ರಾಜ್ಯದ ಜನರನ್ನು ಭಯದ ವಾತಾವರಣದಲ್ಲಿಡಲು ಬಯಸುತ್ತಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಮಾಹಿತಿ ಪ್ರಕಾರ, ಬಿಹಾರದಲ್ಲಿ ಅಪರಾಧ ಪ್ರಮಾಣವು ಶೇ.40ರಷ್ಟಿದೆ. ಪ್ರತಿ 4 ಗಂಟೆಗೊಮ್ಮೆ ಒಂದು ಅತ್ಯಾಚಾರ, 5 ಗಂಟೆಗಳಿಗೊಮ್ಮೆ ಕೊಲೆ ನಡೆಯುತ್ತಿದೆ. ಈ ಬಗ್ಗೆ ನಿತೀಶ್ ಕುಮಾರ್ ತಮ್ಮ ಭಾಷಣದಲ್ಲಿ ಮಾತನಾಡಬೇಕು ಎಂದು ಯಾದವ್ ಒತ್ತಾಯಿಸಿದ್ದಾರೆ.
ನಿತೀಶ್ ರಾಜ್ಯದ ನೈಜ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಅವರು ತಮ್ಮ ಈ 15 ವರ್ಷಗಳ ಅಧಿಕಾರದ ಅವಧಿಯಲ್ಲಿ ಎಷ್ಟು ಯುವಕರಿಗೆ ಉದ್ಯೋಗ ನೀಡಿದ್ದಾರೆ? ಕೊರೊನಾ ಹಾಗೂ ಪ್ರವಾಹ ಎದುರಾದಾಗ ಅವರು ಎಲ್ಲಿ ಹೋಗಿದ್ದರು ಎಂದು ಯಾದವ್ ಪ್ರಶ್ನಿಸಿದ್ದಾರೆ.