ಹಥ್ರಾಸ್ (ಉತ್ತರ ಪ್ರದೇಶ): 2012ರ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿರ್ಭಯಾ ಪರ ವಕೀಲೆಯಾಗಿದ್ದ ಸೀಮಾ ಕುಶ್ವಾಹ ಇದೀಗ ಹಥ್ರಾಸ್ ಪ್ರಕರಣವನ್ನೂ ನಿಭಾಯಿಸಲು ಹೊರಟಿದ್ದಾರೆ.
ಸೀಮಾ ಕುಶ್ವಾಹ ನಿನ್ನೆ ಉತ್ತರ ಪ್ರದೇಶದ ಹಥ್ರಾಸ್ ಸಂತ್ರಸ್ತೆ ಕುಟುಂಬವನ್ನು ಭೇಟಿ ಮಾಡಲು ಹೋಗಿದ್ದು, ಪೊಲೀಸರು ಇವರನ್ನ ತಡೆದಿದ್ದರು. ಸಂತ್ರಸ್ತೆ ಕುಟುಂಬವನ್ನು ಭೇಟಿ ಮಾಡುವವರೆಗೂ ನಾನು ಹಥ್ರಾಸ್ ಬಿಟ್ಟು ಹೋಗುವುದಿಲ್ಲ ಎಂದು ಸೀಮಾ ಹೇಳಿದ್ದರು.
ಸಂತ್ರಸ್ತೆಯ ಸಹೋದರ ನನಗೆ ಪರಿಚಯವಿದ್ದು, ಪ್ರಕರಣದ ವಿರುದ್ಧ ವಕೀಲರಾಗಿ ಹೋರಾಡುವಂತೆ ಯುವತಿ ಕುಟುಂಬದವರು ನನಗೆ ಮನವಿ ಮಾಡಿದ್ದಾರೆ. ಹೀಗಾಗಿ ಈ ಕೇಸ್ಅನ್ನು ನಾನೇ ನಡೆಸಿ, ಮೃತ ಯುವತಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವುದಾಗಿ ಸೀಮಾ ಕುಶ್ವಾಹ ತಿಳಿಸಿದ್ದಾರೆ.
ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಬರ್ಬರವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
ಅಲಿಗರ್ ಆಸ್ಪತ್ರೆ ನೀಡಿರುವ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹಥ್ರಾಸ್ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದಿಲ್ಲ. ಆದರೆ ಗಾಯದ ಗುರುತುಗಳಿವೆ ಎಂದು ಹೇಳಲಾಗಿದೆ. ಹೀಗಾಗಿ ನಾವು FSL ವರದಿಗಾಗಿ ಕಾಯುತ್ತಿದ್ದೇವೆ ಎಂದು ಎಸ್ಪಿ ವಿಕ್ರಾಂತ್ ವೀರ್ ನಿನ್ನೆ ತಿಳಿಸಿದ್ದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರ ಡಿಸೆಂಬರ್ನಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ನಿರ್ಭಯಾ ಪರ ವಕೀಲೆ ಸೀಮಾ ಕುಶ್ವಾಹ ಸತತ 7 ವರ್ಷಗಳ ಕಾಲ ಬೆದರಿಕೆಗಳನ್ನು ಎದುರಿಸಿ ಧೈರ್ಯದಿಂದ ಹೋರಾಡಿದ್ದರು.