ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಮುಖೇಶ್, ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಿಸ್ಕರಿಸಿದ್ದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ. ಈ ಮೂಲಕ ಅಪರಾಧಿಗೆ ಗಲ್ಲು ಖಾಯಂ ಆಗಿದೆ.
ರಾಷ್ಟ್ರಪತಿಗಳಿಂದ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡಿದ್ದ ಹಿನ್ನೆಲೆ ಇದನ್ನು ಪ್ರಶ್ನಿಸಿ ಸುಪ್ರೀಂಗೆ ಮುಖೇಶ್ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾ. ಆರ್.ಭಾನುಮತಿ ನೇತೃತ್ವದ ಮೂವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ, ರಾಷ್ಟ್ರಪತಿಗಳು ಯಾವುದನ್ನೂ ಗಮನಿಸದೆ ಆತುರದ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದೆ. ಅಲ್ಲದೆ ರಾಷ್ಟ್ರಪತಿಗಳಿಂದ ತಿರಸ್ಕೃತವಾದ ಅರ್ಜಿಯನ್ನು ಜೈಲಿನಲ್ಲಿ ಕಿರುಕುಳ ನೀಡಲಾಗಿದೆ ಎಂಬ ಆಧಾರದ ಮೇಲೆ ಪ್ರಶ್ನಿಲಾಗುವುದಿಲ್ಲ. ಹಾಗಾಗಿ ಅಪರಾಧಿಯ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅರ್ಜಿಯನ್ನು ವಜಾ ಮಾಡಿದೆ. ಇದೇ ವೇಳೆ ಈ ಪ್ರಕರಣದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಕ್ಷಮಾದಾನ ಅರ್ಜಿ ಸಲ್ಲಿಸುವ ವೇಳೆ ಅಧೀನ ನ್ಯಾಯಾಲಯದಿಂದ ಹಿಡಿದು ಹೈಕೋರ್ಟ್, ಸುಪ್ರೀಂ ಕೋರ್ಟ್ನ ತೀರ್ಪುಗಳ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ರಾಷ್ಟ್ರಪತಿಗಳಿಗೆ ಕಳಿಸಿಕೊಡಲಾಗಿದೆ. ಅದೆಲ್ಲವನ್ನು ಪರಿಶೀಲಿಸಿ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿಸ್ಕರಿಸಿದ್ದಾರೆ ಎಂದು ಕೋರ್ಟ್ ಹೇಳಿದೆ. ಇದೇ ವೇಳೆ ಎಲ್ಲಾ ದಾಖಲೆಗಳನ್ನು ರಾಷ್ಟ್ರಪತಿಗಳಿಗೆ ಕಳಿಸಿಕೊಡಲಾಗಿಲ್ಲ ಎಂಬ ಅಪರಾಧಿ ಪರ ವಕೀಲರು ಮಾಡಿದ್ದ ಆರೋಪವನ್ನು ಕೋರ್ಟ್ ತಳ್ಳಿಹಾಕಿದೆ.
ಮತ್ತೊಂದೆಡೆ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಸುಪ್ರೀಂಕೋರ್ಟ್‌ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿ ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದಾನೆ. ಈಗಾಗಲೇ ಅಪರಾಧಿಗಳಾದ ವಿನಯ್ ಹಾಗೂ ಮುಖೇಶ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ತಿರಸ್ಕೃತವಾಗಿವೆ.