ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಕೆರೆ, ವರ್ತೂರು ಕೆರೆ ಅಭಿವೃದ್ಧಿ ಹಾಗೂ ಸ್ವಚ್ಛ ಮಾಡಲು ಸಂಪೂರ್ಣವಾಗಿ ವಿಫಲಗೊಂಡಿರುವ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಗರಂ ಆಗಿದ್ದು, ಅಧಿಕಾರಿಗಳನ್ನ ಜೈಲಿಗೆ ಯಾಕೆ ಹಾಕಬಾರದು ಎಂಬ ಪ್ರಶ್ನೆ ಮಾಡಿದೆ.
ಮಲಿನಗೊಂಡಿರುವ ಬೆಳ್ಳಂದೂರು ಹಾಗೂ ವರ್ತೂರು ಕೆರೆ ಪುನರುಜ್ಜೀವನಗೊಳಿಸಲು ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಮಹತ್ವದ ಯೋಜನೆ ರೂಪಿಸಿದ್ದವು. ಆದರೆ ಇಷ್ಟೆಲ್ಲ ಕ್ರಮ ಕೈಗೊಂಡಿದ್ದರೂ ಕೆರೆ ಮಾಲಿನ್ಯ ಮಾತ್ರ ಒಂದಿಷ್ಟೂ ಕಡಿಮೆ ಆಗಿಲ್ಲ. ಇದರಿಂದ ಸಿಡಿಮಿಡಿಗೊಂಡಿರುವ ನ್ಯಾಯಾಧಿಕರಣ ಬಿಬಿಎಂಪಿ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದೆ. ಕೆರೆ ಅಭಿವೃದ್ಧಿ ವಿಷಯದಲ್ಲಿ ಉದಾಸೀನತೆ ತೋರಿಸುತ್ತಿರುವ ರಾಜ್ಯ ಸರ್ಕಾರಕ್ಕೂ ಚಾಟಿ ಏಟಿನ ರುಚಿ ತೋರಿಸಲು ಮುಂದಾಗಿದೆ. ಕಳೆದ ಅಕ್ಟೋಬರ್ನಲ್ಲಿ ಈ ಸಂಬಂಧ ಹಸಿರು ನ್ಯಾಯಮಂಡಳಿ ಕೆರೆ ಅಭಿವೃದ್ಧಿಗೆ ಹಾಗೂ ಮಲೀನ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕಟ್ಟು ನಿಟ್ಟಿನ ಆದೇಶ ನೀಡಿತ್ತು.
ಆದರೆ ಈ ತೀರ್ಪಿನ ಆದೇಶ ಪಾಲಿಸುವಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ವಿಫಲವಾಗಿತ್ತು. ಈ ಸಂಬಂಧ ನಡೆದ ವಿಚಾರಣೆ ವೇಳೆ, ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಸಂಬಂಧ ಪಟ್ಟ ಅಧಿಕಾರಿಗಳನ್ನು ಜೈಲಿಗೆ ಯಾಕೆ ಕಳುಹಿಸಬಾರದು ಎಂದು ಪ್ರಶ್ನಿಸಿದರು.
ಇನ್ನು ಗ್ರೀನ್ ಟ್ರಿಬ್ಯುನಲ್ ಆದೇಶದ ಅನ್ವಯ ಬಿಬಿಎಂಪಿ ಈ ವರ್ಷದ ಆರಂಭದಲ್ಲೇ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿತ್ತು. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಂಡರೂ ಅದು ಪರಿಣಾಮಕಾರಿ ಆಗಿರಲಿಲ್ಲ. ಇನ್ನು ವರ್ತೂರು ಕೆರೆಯಲ್ಲಿ ಯಾವುದೇ ಕಾರ್ಯಕ್ರಮಗಳು ಜಾರಿ ಆಗಿರಲಿಲ್ಲ. ಬಿಡಿಎ ಅಗರ ಮತ್ತು ವರ್ತೂರು ಕೆರೆಗಳ ಬಗ್ಗೆ ಮೇಲ್ವಿಚಾರಣೆ ಹಾಗೂ ಪುನರುಜ್ಜೀವನ ಸಮಿತಿಗಳನ್ನು ರಚನೆ ಮಾಡಿದರೂ ಕೆಲಸ ಮಾತ್ರ ಆಗಿರಲಿಲ್ಲ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, ಕೆರೆಗಳ ಅಭಿವೃದ್ಧಿಗಾಗಿ ಈಗಾಗಲೇ ಅನೇಕ ಕ್ರಮ ಕೈಗೊಂಡಿದ್ದು, ಮಾಲಿನ್ಯವಾಗದಂತೆ ತಡೆಗಟ್ಟಲು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಿದೆ ಎಂದು ತಿಳಿಸಿದ್ದಾರೆ.
ಇದೀಗ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕೇಳಿರುವ ಪ್ರಶ್ನೆಗೆ ರಾಜ್ಯ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬ ಕುತೂಹಲವನ್ನುಂಟು ಮಾಡಿದೆ. ಎನ್ಜಿಟಿಗೆ ಸರ್ಕಾರ ಹಾಗೂ ಬಿಬಿಎಂಪಿ ಸುಧಾರಣಾ ಕ್ರಮದ ವರದಿ ಸಹ ಸಲ್ಲಿಕೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.
ಈ ಹಿಂದೆ ಸಹ ಬೆಳ್ಳಂದೂರು ಹಾಗೂ ವರ್ತೂರು ಕೆರೆ ಶುಚಿ ಮಾಡಲು 500 ಕೋಟಿ ರೂಪಾಯಿಯನ್ನು ಎಸ್ಕೋದಲ್ಲಿ ಠೇವಣಿ ಇಡುವಂತೆ ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಕೇಂದ್ರ ಮಾಲೀನ್ಯ ನಿಯಂತ್ರಣಾ ಮಂಡಳಿ ಸರ್ಕಾರಕ್ಕೆ ಸೂಚನೆ ನೀಡಿ, 75 ಕೋಟಿ ರೂ ದಂಡ ವಿಧಿಸಿತ್ತು. ಈ ಸಂಬಂಧ ಕರ್ನಾಟಕ ಸರ್ಕಾರ ಮೇಲ್ಮನವಿ ಕೂಡಾ ಸಲ್ಲಿಸಿದೆ.