ಮೆಹ್ಸಾನ(ಗುಜರಾತ್): ಆರು ದಿನಗಳ ಹಿಂದೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಜನಿಸಿದ ಅವಳಿ ಸಹೋದರ ಮತ್ತು ಸಹೋದರಿಗೆ ಕೊರೊನಾ ಸೋಂಕು ತಗುಲಿದೆ. ವೈರಲ್ ಸೋಂಕಿಗೆ ತುತ್ತಾದ ರಾಜ್ಯದ ಕಿರಿಯ ರೋಗಿಗಳಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಜಿಲ್ಲೆಯ ಮೋಲಿಪುರ ಗ್ರಾಮದ ಮಹಿಳೆಯೊಬ್ಬರು ಮೇ 16 ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಜಿಲ್ಲಾ ಅಭಿವೃದ್ಧಿ ಅಧಿಕಾರಿ ಮನೋಜ್ ದಾಕ್ಷಿಣಿ ತಿಳಿಸಿದ್ದಾರೆ. ಗುಜರಾತ್ನಲ್ಲಿ ನವಜಾತ ಶಿಶುಗಳು, ಅದರಲ್ಲೂ ಅವಳಿ ಮಕ್ಕಳು, ಕೊರೊನಾ ಸೋಂಕಿಗೆ ತುತ್ತಾದ ಮೊದಲ ಪ್ರಕರಣ ಇದಾಗಿದೆ ಎಂದಿದ್ದಾರೆ.
ಮೇ 18 ರಂದು ಗಂಡು ಶಿಶುವಿಗೆ ಸೋಂಕು ತಗುಲಿರುವುದು ದೃಢವಾದರೆ, ಹೆಣ್ಣು ಶಿಶುವಿನ ವರದಿ ಶುಕ್ರವಾರ ಬಂದಿದೆ. ಸದ್ಯ ಶಿಶುಗಳ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಮಹಿಳೆ ಮೊಲಿಪುರ ಗ್ರಾಮದವರಾಗಿದ್ದಾರೆ. ಮುಂಬೈನಿಂದ ಆಗಮಿಸಿದ ಮೂವರು ವ್ಯಕ್ತಿಗಳಲ್ಲಿ ಸೋಂಕು ಕಂಡಬಂದ ನಂತರ ಈ ಗ್ರಾಮದಲ್ಲಿ ಹಲವು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂದು ದಾಕ್ಷಿಣಿ ಹೇಳಿದ್ದಾರೆ. ಮೆಹ್ಸಾನಾ ಜಿಲ್ಲೆಯಲ್ಲಿ ಈವರೆಗೆ 93 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.