ನವದೆಹಲಿ: ಕೇಂದ್ರ ಸಚಿವ ಸಂಪುಟದಿಂದ ಜುಲೈ 29, 2020 ರಂದು ಅನುಮೋದನೆ ಪಡೆದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶಿಕ್ಷಣ ಸಂರಚನೆಯ ಆಮೂಲಾಗ್ರ ಬದಲಾವಣೆಗೆ ಮುನ್ನುಡಿಯಾಗಿದೆ. ಇದು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಎರಡರ ಆಮೂಲಾಗ್ರ ಬದಲಾಣೆಯ ಉದ್ದೇಶ ಹೊಂದಿದೆ. ಶಿಕ್ಷಣದ ಸಂರಚನೆ ಮತ್ತು ಶಿಕ್ಷಣ ಈ ಎರಡೂ ಅಂಶಗಳನ್ನು ನೂತನ ಶಿಕ್ಷಣ ನೀತಿಯಲ್ಲಿ ಸೇರಿಸಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಎಂಟು ಆದ್ಯತಾ ವಲಯಗಳನ್ನು ಪ್ರಸ್ತಾಪಿಸಲಾಗಿದೆ:
1. ಶಾಲಾ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ
2. ಶಾಲಾ ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳು
3. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ
4. ಪಾಲ್ಗೊಳ್ಳುವಿಕೆ
5. ಮೌಲ್ಯಮಾಪನಗಳು
6. ಪಠ್ಯಕ್ರಮ ಮತ್ತು ಶಿಕ್ಷಣ ಚೌಕಟ್ಟು
7. ಶಿಕ್ಷಕರ ನೇಮಕಾತಿ / ಶಿಕ್ಷಕರ ಶಿಕ್ಷಣ
8. ಸರ್ಕಾರಿ ಇಲಾಖೆಗಳು / ಸಂಸ್ಥೆಗಳ ಪಾತ್ರ
ಶಿಕ್ಷಣ ವ್ಯವಸ್ಥೆಯಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಪರಿಚಯಿಸುವ ಅಂತಿಮ ಗುರಿಯೊಂದಿಗೆ "ಭಾರತವು ಜಾಗತಿಕ ಜ್ಞಾನದ ಸೂಪರ್ ಪವರ್". ಶಿಕ್ಷಣಶಾಸ್ತ್ರೀಯವಾಗಿ ಇದು ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದ ಪಠ್ಯಕ್ರಮದಲ್ಲಿ ಸಮಗ್ರ ಬದಲಾವಣೆಯನ್ನು ತರಲಿದೆ. ಕಲಿಕೆಯ ಸಂದರ್ಭದಲ್ಲಿ ಮಾತೃಭಾಷೆಯನ್ನು "ಕನಿಷ್ಠ 5 ನೇ ತರಗತಿಯವರೆಗೆ ಬೋಧನಾ ಮಾಧ್ಯಮವಾಗಿ" ಉತ್ತೇಜಿಸುವುದು ಅತ್ಯಂತ ಮಹತ್ವದ ಅಂಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಕವಾಗಿದೆ. ಅದೇ ರೀತಿ ಉದಾರ ಕಲೆಗಳಿಗೆ ಒತ್ತು ನೀಡುವುದು ಗಮನಾರ್ಹ ಅಂಶವಾಗಿದೆ. ಇದರಲ್ಲಿ ಶೈಕ್ಷಣಿಕ ಶಿಸ್ತಿನ ಜತೆಗೆ ವೃತ್ತಿಪರ ತರಬೇತಿಯೂ ಸೇರಿದೆ. ಪ್ರಾಥಮಿಕ ಶಿಕ್ಷಣಕ್ಕಾಗಿ ಉದಾರ ಕಲೆಗಳ ವಿಧಾನವು ವೃತ್ತಿಪರ ಶಿಕ್ಷಣಕವನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಶಾಲಾ ಶಿಕ್ಷಣವು ಒಂದು ಅಡಿಪಾಯ ಹಂತ (3 ವರ್ಷದಿಂದ 8 ವರ್ಷಗಳು), ಪೂರ್ವಸಿದ್ಧತಾ ಹಂತ (8 ರಿಂದ 11 ವರ್ಷಗಳು), ಮಧ್ಯಮ ಹಂತ (11ರಿಂದ 14 ವರ್ಷಗಳು ಮತ್ತು ದ್ವಿತೀಯ ಹಂತ (14 ರಿಂದ 18 ವರ್ಷಗಳು) ಒಳಗೊಂಡಿರುತ್ತದೆ.
ಉದಾರ ಕಲೆಗಳ ವಿಧಾನ ಮತ್ತು ಒಗ್ಗೂಡಿಸುವ ವೃತ್ತಿಪರ ಶಿಕ್ಷಣವನ್ನು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಸೇರಿದ ಸಂದರ್ಭದಲ್ಲಿ ನಡೆಸಲಾಗುತ್ತದೆ, ಅಲ್ಲಿ ಅದನ್ನು ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ (ಸಿಬಿಸಿಎಸ್) ಮೂಲಕ ಪಡೆಯಬಹುದಾಗಿದೆ. ಉನ್ನತ ಶಿಕ್ಷಣದಲ್ಲಿ ಉದಾರ ಕಲೆ ಕಾರ್ಯಕ್ರಮವು ಶೈಕ್ಷಣಿಕ ವಿಭಾಗಗಳನ್ನು ವೃತ್ತಿಪರ ಶಿಕ್ಷಣದೊಂದಿಗೆ ಒಗ್ಗೂಡಿಸುತ್ತದೆ. ಯಾವುದೇ ವಿಭಾಗ / ಅಧ್ಯಯನದ ವಿಷಯದಲ್ಲಿ ವಿದ್ಯಾರ್ಥಿಯ ಪ್ರಮುಖ ಸಾಮರ್ಥ್ಯಕ್ಕೆ ಧಕ್ಕೆ ಬಾರದಂತೆ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಇದಲ್ಲದೇ, ಕಲೆ ಮತ್ತು ವಿಜ್ಞಾನದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಮೂರು ವರ್ಷಗಳ ಪದವಿ ಪೂರ್ವ ಕಾರ್ಯಕ್ರಮವನ್ನು ನಾಲ್ಕು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ. ಆದಾಗ್ಯೂ, ವಿದ್ಯಾರ್ಥಿಗೆ ಒಂದು ವರ್ಷ (ಪ್ರಮಾಣಪತ್ರ ಶಿಕ್ಷಣ), ಎರಡು ವರ್ಷ (ಡಿಪ್ಲೊಮಾ ಪ್ರಮಾಣಪತ್ರ ಅಥವಾ ಮೂರು ವರ್ಷಗಳ (ಪದವಿ ಪ್ರಮಾಣಪತ್ರ) ಪಡೆದು ಶಿಕ್ಷಣವನ್ನು ಮೊಟಕುಗೊಳಿಸುವ ಅವಕಾಶವಿದೆ. ಸಂಶೋಧನಾ ವೃತ್ತಿಯನ್ನು ಬಯಸುವವರು ಮಾತ್ರ ನಾಲ್ಕನೇ ವರ್ಷವನ್ನು ಆಯ್ಕೆಮಾಡಿಕೊಳ್ಳಲು ಅವಕಾಶವಿದೆ.. ವಿದ್ಯಾರ್ಥಿಗಳ ಚಲನಶೀಲತೆಯನ್ನು ಉತ್ತೇಜಿಸುವ ಸಲುವಾಗಿ, ಅವರು ಕ್ರೆಡಿಟ್ ಉಳಿಸುವ ಆಯ್ಕೆ ಯನ್ನು ಹೊಂದಿರುತ್ತಾರೆ ಮತ್ತು ಸ್ವಲ್ಪ ಸಮಯದ ನಂತರ ಅವರು ಮತ್ತೆ ಕೋರ್ಸ್‌ಗೆ ಮರು ಸೇರ್ಪಡೆ ಮಾಡಬಹುದು.
ನೂತನ ಶಿಕ್ಷಣ ನೀತಿಯು ಉನ್ನತ ಶಿಕ್ಷಣ ಸಂಸ್ಥೆಗಳ ಸಮಗ್ರ ಪುನರ್ರಚನೆಯ ಕುರಿತು ಪ್ರಸ್ತಾಪಿಸುತ್ತದೆ. ಮೊದಲಿಗೆ ಈಗಿರುವ ಮಾನವ ಸಂಪನ್ಮೂಲ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರು ನಾಮಕರಣ ಮಾಡುವುದರೊಂದಿಗೆ ನೂತನ ಶಿಕ್ಷಣ ನೀತಿಗೆ ಮುನ್ನುಡಿ ಬರೆಯುತ್ತದೆ. ಎಲ್ಲ ಹಂತದ ನಿರ್ವಹಣೆ, ನಿಯಂತ್ರಣ ಹಾಗೂ ಶಿಕ್ಷಣ ಸಂಪನ್ಮೂಲ ಹಾಗೂ ಕೌಶಲ್ಯವನ್ನು ಸೃಷ್ಟಿಸುವ ಪ್ರಸಾರ ಮತ್ತು ಚಲನಶೀಲತೆಯನ್ನು ಪ್ರಧಾನಮಂತ್ರಿ ನೇತೃತ್ವದ ಕೇಂದ್ರೀಕೃತ ರಾಷ್ಟ್ರೀಯ ಶಿಕ್ಷಣ ಆಯೋಗ (ಆರ್‌ಎಸ್‌ಎ)ವು ನಿರ್ಧರಿಸಲಿದೆ. ಈ ಸಂಸ್ಥೆ ಕೇಂದ್ರ ಸಚಿವರು ಮತ್ತು ಕೇಂದ್ರದ ಹಿರಿಯ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ರಾಷ್ಟ್ರೀಯ ಶಿಕ್ಷಣ ಆಯೋಗ (ಆರ್‌ಎಸ್‌ಎ) ಅದರ ಕಾರ್ಯಕಾರಿ ಮಂಡಳಿಯ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (ಎಚ್‌ಇಐ) ಪ್ರತ್ಯೇಕವಾಗಿ ಧನಸಹಾಯ ನೀಡುವ, ಮಾನದಂಡಗಳನ್ನು ನಿಗದಿಪಡಿಸುವ, ಮಾನ್ಯತೆ ನೀಡುವ ಮತ್ತು ನಿಯಂತ್ರಿಸುವ ಕಾರ್ಯವನ್ನು ಆಯೋಗಕ್ಕೆ ನಿಯೋಜಿಸಲಿದೆ. ಖಾಸಗಿ ಮತ್ತು ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳೆರಡಕ್ಕೂ ಏಕರೂಪದ ನಿಯಂತ್ರಣ ಮತ್ತು ಫಲಿತಾಂಶಗಳ ನಿಯತಾಂಕಗಳನ್ನು ಅಭಿವೃದ್ಧಿಪಡಿಸಲಾಗುವುದು.
ಸಂಯೋಜಿತ ಕಾಲೇಜುಗಳನ್ನು ಹೊಂದುವ ವ್ಯವಸ್ಥೆವುಳ್ಳ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಈ ನೀತಿಯು ಪ್ರಸ್ತಾಪಿಸಿದೆ. ಇದರ ಬದಲಾಗಿ ಮೂರು ರೀತಿಯ ವಿಶ್ವ ವಿದ್ಯಾಲಯಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ. ಅವುಗಳೆಂದರೆ ಬಹು ಶಿಸ್ತಿನ ಸಂಶೋಧನಾ ವಿಶ್ವ ವಿದ್ಯಾಲಯಗಳು (ಟೈಪ್ 1), ಬಹುಶಿಸ್ತಿನ ಬೋಧನಾ ವಿಶ್ವವಿದ್ಯಾಲಯಗಳು (ಟೈಪ್ 2), ಮತ್ತು ಸ್ವಾಯತ್ತ ಬಹು ಶಿಸ್ತಿನ ಕಾಲೇಜುಗಳು (ಟೈಪ್ 3). ಉನ್ನತ ಅರ್ಹತೆ ಆಧಾರಿತ ಮಾನದಂಡಗಳ ಮೂಲಕ ಅಧ್ಯಾಪಕರ ನೇಮಕಾತಿ ಮತ್ತು ಅವರನ್ನು ಸಂಸ್ಥೆಯಲ್ಲಿ ಉಳಿಸಿಕೊಳ್ಳುವುದನ್ನು ಈ ನೀತಿ ಪ್ರತಿಪಾದಿಸಲಾಗುತ್ತದೆ.
ಆರಂಭಿಕ ಸಮಸ್ಯೆಗಳಿಲ್ಲದೇ ಈ ರೀತಿಯ ಸುಧಾರಣೆಯನ್ನು ಕಾರ್ಯಗತಗೊಳಿಸಬಹುದು ಎಂದು ನಂಬಬಹುದಾಗಿದೆ. ಆದ್ದರಿಂದ, ಶಿಕ್ಷಣ ಸುಧಾರಣೆಯ ಸಮಾನತೆ ತರುವ ಮಹತ್ವಾಕಾಂಕ್ಷೆಯ ನೀತಿಯನ್ನು ಹೊಂದಿರುವ ಹೊಸ ಶಿಕ್ಷಣ ನೀತಿ 2020ರ ರೂಪುರೇಷೆಯನ್ನು ಸಿದ್ದಪಡಿಸುವಲ್ಲಿ ಆದ ಆರಂಭಿಕ ಪ್ರಯೋಗಗಳ ಕುರಿತು ಸಂಕ್ಷಿಪ್ತವಾಗಿ ಹೇಳುವುದು ಯೋಗ್ಯವಾಗಿರುತ್ತದೆ. ಯುರೋಪಿನಲ್ಲಿ ಬೊಲೊಗ್ನಾ ಸಮಾವೇಶವನ್ನು 1998-1999ರಲ್ಲಿ ಪ್ರಾರಂಭಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ರಾಷ್ಟ್ರಗಳ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಗುರಿ ಬೊಲಾಗ್ನಾ ಸಮಾವೇಶದ್ದಾಗಿತ್ತು. ಇದರ ಪ್ರಕಾರ ಮೂರು ರೀತಿಯ ಪದವಿ ರಚನೆ (ಸ್ನಾತಕ, ಸ್ನಾತಕೋತ್ತರ, ಡಾಕ್ಟರೇಟ್), ಮತ್ತು ಯುರೋಪಿಯನ್ ಕ್ರೆಡಿಟ್ ವರ್ಗಾವಣೆ ಮತ್ತು ಕ್ರೋಢೀಕರಣ ವ್ಯವಸ್ಥೆ (ಇಸಿಟಿಎಸ್) ತರುವುದರೊಂದಿಗೆ ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿ ಗುಣಮಟ್ಟದ ಭರವಸೆಗಾಗಿ ಯುರೋಪಿಯನ್ ಮಾನದಂಡಗಳು ಮತ್ತು ಮಾರ್ಗಸೂಚಿಗಳು ಅಳವಡಿಸಿಕೊಳ್ಳುವ ಉದ್ದೇಶ ಹೊಂದಿತ್ತು. ಇದು ಗುಣಮಟ್ಟದ ಭರವಸೆಯನ್ನು ಸಹ ಒಳಗೊಂಡಿದೆ, ಇದರಿಂದ ವಿದ್ಯಾರ್ಥಿಗಳು, ಪದವೀಧರರು, ವಿಶ್ವವಿದ್ಯಾಲಯಗಳು ಮತ್ತು ಇತರ ಎಲ್ಲ ಪಾಲುದಾರರು ವಿಭಿನ್ನ ವ್ಯವಸ್ಥೆಗಳ ಗುಣಮಟ್ಟ ಮತ್ತು ವಿಭಿನ್ನ ಪೂರೈಕೆದಾರರ ಕೆಲಸದ ಬಗ್ಗೆ ವಿಶ್ವಾಸ ಹೊಂದಬಹುದು.
ಹೊಸ ಶಿಕ್ಷಣ ನೀತಿ (2020) ಅಪಾಯಗಳನ್ನು ತಪ್ಪಿಸುತ್ತದೆಯೇ ಎಂಬುದು ಪ್ರಮುಖ ಪ್ರಶ್ನೆ. ನೀತಿಯಲ್ಲಿನ ಕೆಲವು ವಿಚಾರಗಳ ಕುರಿತಿರವ ಮೌನತೆ ಮತ್ತು ವಿರೋಧಾಭಾಸಗಳು ಇಲ್ಲಿ ಪ್ರಸ್ತುತ ಎನಿಸುತ್ತದೆ. ಈ ನೀತಿಯ ಊದ್ದೇಶಗಳಿಗೆ ಮೊದಲು ಇರುವ ಮಹತ್ವದ ಅಡೆತಡೆ ಎಂದರೆ 2035ರ ವೇಳೆಗೆ ಒಟ್ಟು ದಾಖಲಾತಿ ಅನುಪಾತದಲ್ಲಿ ಶೇ 50ಕ್ಕೆ ಏರಿಕೆಯಾಗಲು ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ವಾಸ್ತವ ಎನಿಸಿರುವ ಬಿಕ್ಕಟ್ಟುಗಳು. ಒಟ್ಟು ದಾಖಲಾತಿ ಅನುಪಾತದಲ್ಲಿ ಶೇ 50ರಷ್ಟುಪ್ರಮಾಣ ಏರಿಕೆಯಾಗಲು ಪ್ರಾಥಮಿಕ ಶಿಕ್ಷಣದ ಮೂಲಸೌಕರ್ಯದಲ್ಲಿ ತಕ್ಕ ಬದಲಾವಣೆ ಅಗತ್ಯವಿರುತ್ತದೆ. ಧನಸಹಾಯ ಎಲ್ಲಿಂದ ಬರುತ್ತದೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಯೋಜನೆ ಕೂಡ ತಾತ್ಕಾಲಿಕ, ಇದು ಖಾಸಗಿ ಮತ್ತು ಲೋಕೋಪಕಾರಿ ಕೊಡುಗೆಗಳಿಗಾಗಿ ಆಶಿಸುತ್ತಿದೆ, ಆದಾಗ್ಯೂ, ಗ್ರಾಮೀಣ ಪ್ರಾಥಮಿಕ ಶಿಕ್ಷಣದಲ್ಲಿ ಅಂತಹ ಕೊಡುಗೆ ವಿರಳವಾಗಿದೆ ಎಂದು ಇತಿಹಾಸವು ಸೂಚಿಸುತ್ತದೆ. ನೀತಿ ದಾಖಲೆಯ ಪ್ರಕಾರ ಆನ್‌ಲೈನ್ ದೂರಶಿಕ್ಷಣ (ಒಡಿಎಲ್) ಮತ್ತು ಬೃಹತ್ ಆನ್‌ಲೈನ್ ಕೋರ್ಸ್‌ಗಳು (ಎಂಒಒಸಿ) ಒಟ್ಟು ದಾಖಲಾತಿ ಅನುಪಾತವನ್ನು ಶೇ.50 ಕ್ಕೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ಆದರೆ, ಕೋವಿಡ್-19ರ ಸಂದರ್ಭದಲ್ಲಿ ನಡೆ್ದ ಆನ್ ಲೈನ್ ತರಗತಿಗಳು ಗ್ರಾಮೀಣ ಬಡ ವರ್ಗದವರು ಯೋಗ್ಯ ಉಪಕರಣದ ಲಭ್ಯತೆ ಇಲ್ಲದೇ ತರಗತಿಗಳಿಗೆ ಹಾಜರಾಗದಿರುವುದಕ್ಕೆ ಸಾಕ್ಷಿ ನಮ್ಮ ಕಣ್ಮುಂದೆ ಇದೆ.
ಈ ನೀತಿಯು ಪ್ರಸ್ತುತ ಮಾರುಕಟ್ಟೆ ಆಧಾರಿತ ಕೋರ್ಸ್‌ಗಳಿಗೆ ಒಲವು ತೋರುವ ಅಂತರ್ಗತ ಪ್ರವೃತ್ತಿಯನ್ನು ಹೊಂದಿದೆ, ಇದು ಈಗಾಗಲೇ ದುರ್ಬಲಗೊಂಡಿರುವ ಉನ್ನತ ಶಿಕ್ಷಣದ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯದ ವಿರುದ್ಧಆಗಬಹುದು. ನಾಲ್ಕು ವರ್ಷದ ಪದವಿ ಕಾರ್ಯಕ್ರಮದ ಪರಿಚಯವು ಶಿಕ್ಷಣಕ್ಕೆ ಒಂದು ವರ್ಷದ ಅಧಿಕ ಆರ್ಥಿಕ ಮೌಲ್ಯದ ವೆಚ್ಚವನ್ನು ವಿಧಿಸುತ್ತದೆ, ಇದು ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗುವುದನ್ನಂತೂ ಸಾಬೀತುಪಡಿಸುತ್ತದೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಅನೇಕ ಶ್ರೇಷ್ಠ ವಿದ್ಯಾರ್ಥಿಗಳು ಆರ್ಥಿಕ ಹೊರೆಯಿಂದಾಗಿ ಸಂಶೋಧನೆ ಮತ್ತು ಉನ್ನತ ಶಿಕ್ಷಣ ವೃತ್ತಿಯನ್ನು ಆರಿಸುವುದಕ್ಕಿಂತ ನೀತಿಯಲ್ಲಿ ಅವಕಾಶ ಕಲ್ಪಿಸಿರುವ ವಿವಿಧ ನಿರ್ಗಮದ ಹಾದಿಯನ್ನು ಕಡ್ಡಾಯವಾಗಿ ಪಾಲಿಸಬೇಕಾದ ಪರಿಸ್ಥಿತಿ ಬರಬಹುದು. ಈ ಪ್ರವೃತ್ತಿಯನ್ನು ಇನ್ನೊಂದು ಅಂಶ ಕೂಡ ಪ್ರತಿಪಾದಿಸುತ್ತದೆ. ಅದೇನೆಂದರೆ ಈ ಹೊಸ ಶಿಕ್ಷಣ ನೀತಿಯು ಶುಲ್ಕ ರಚನೆಯನ್ನು ಪೂರೈಸಲು ಶೈಕ್ಷಣಿಕ ಸಾಲಗಳನ್ನು ಪಡೆಯಲು ಅವಕಾಶ ಕಲ್ಪಿಸಿರುವುದು. ಕೈಗಾರಿಕೆ ಹಾಗೂ ವಾಣಿಜ್ಯ ವ್ಯವಹಾರಗಳಿಗೆ ಉದ್ಯೋಗಿಗಳನ್ನು ಒದಗಿಸಲು ಬೇಕಾದ ಸಂಶೋಧನೆ ಮತ್ತು ಅಭಿವೃದ್ದಿ ಚಟುವಟಿಕೆಗಳನ್ನು ಉನ್ನತ ಶಿಕ್ಷಣದಲ್ಲಿ ಸೇರಿಸಿ ಬಲಪಡಿಸುವ ಉದ್ದೇಶವನ್ನು ಹೊಂದಿದೆ. ನೀತಿಯ ಅನುಷ್ಠಾನವನ್ನು ಹೆಚ್ಚಿಸಲು ಈ ವಿಷಯಗಳ ಕುರಿತು ಚರ್ಚೆಯನ್ನು ಕಡೆಗಣಿಸುವುದು ಉಚಿತವಲ್ಲ.