ಜೈಪುರ್: ದೇಶದಲ್ಲಿ ಅತ್ಯಾಚಾರದಂತಹ ಅಮಾನವೀಯ ಕೃತ್ಯಗಳು ನಿಲ್ಲುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಕಳೆದ ಕೆಲ ದಿನಗಳ ಹಿಂದೆ ಹಥ್ರಾಸ್ನಲ್ಲಿ ನಡೆದ ಗ್ಯಾಂಗ್ರೇಪ್ ಪ್ರಕರಣ ಇಡೀ ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಇದೀಗ ರಾಜಸ್ಥಾನದ ಜೈಪುರ್ನಲ್ಲಿ ಮತ್ತೊಂದು ದುಷ್ಕೃತ್ಯ ನಡೆದಿದೆ.
ವಿವಾಹಿತ ಮಹಿಳೆಯೊಬ್ಬಳ ಮೇಲೆ ಮೂವರು ಕಾಮುಕರು ಅತ್ಯಾಚಾರವೆಸಗಿರುವ ಘಟನೆ ನಡೆದಿದ್ದು, ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ವಿಶ್ವಕರ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಸರ್ದಾರ್ ಟೌನ್ನಲ್ಲಿ ವಾಸವಾಗಿದ್ದ 26 ವರ್ಷದ ಚಾರು ಆರ್ಥಿಕ ಸಹಾಯಕ್ಕಾಗಿ ಸಂಬಂಧಿಯೊಬ್ಬರ ಬಳಿ ಕೇಳಿಕೊಂಡಿದ್ದರು. ಈ ವೇಳೆ ತಾನು ಹೋಟೆಲ್ನಲ್ಲಿದ್ದು, ಅಲ್ಲಿಗೆ ಬಂದು ಹಣ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಅಲ್ಲಿಗೆ ತೆರಳಿದ್ದ ಮಹಿಳೆ ಮೇಲೆ ಸಂಬಂಧಿ ಹಾಗೂ ಆತನ ಇಬ್ಬರು ಗೆಳೆಯರು ಸೇರಿ ಅತ್ಯಾಚಾರವೆಸಗಿದ್ದಾರೆ.
ಹೋಟೆಲ್ನಲ್ಲಿ ಅಳವಡಿಕೆ ಮಾಡಿರುವ ಸಿಸಿಟಿವಿ ವಿಡಿಯೋ ವಶಕ್ಕೆ ಪಡೆದುಕೊಂಡು ಆರೋಪಿಗಳಿಗಾಗಿ ಬಲೆ ಬೀಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಜತೆಗೆ ಆರೋಪಿಗಳನ್ನ ಆದಷ್ಟು ಬೇಗ ಬಂಧನ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.