ನವದೆಹಲಿ: ಕೊರೊನಾ ಸೋಂಕು ಜನರನ್ನು ಆತಂಕಕ್ಕೆ ಒಳಪಡಿಸಿದೆ. ಕೊರನಾ ಸೊಂಕಿಗೆ ಒಳಗಾಗಿದವರಿಗಿಂತ, ಸೋಂಕು ನಮಗೂ ತಗುಲಬಹುದು ಎನ್ನುವ ಜನರ ಆತಂಕ ದೂರ ಮಾಡುವುದು ದೊಡ್ಡ ಸವಾಲೇ ಸರಿ.
ತಜ್ಞರು ಇದಕ್ಕಾಗಿ ತಂತ್ರಜ್ಞಾನದ ಮೊರೆ ಹೋಗಿದ್ದು, ಪ್ಯಾನಿಕ್ ಮೆಕ್ಯಾನಿಕ್ (PanicMechanic) ಎನ್ನುವ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಸದ್ಯದಲ್ಲೇ ಈ ಆ್ಯಪ್ ನಿಮ್ಮ ಆ್ಯಂಡ್ರಾಯ್ಡ್ ಹಾಗೂ ಐಫೋನ್ ಮೊಬೈಲ್ಗಳಲ್ಲಿ ಲಭ್ಯವಾಗಲಿದೆ. ಈ ಆ್ಯಪ್ ನಿಮ್ಮ ಮೊಬೈಲ್ ಕ್ಯಾಮೆರಾ ಟಚ್ ಸೆನ್ಸಾರ್ ಇತರೇ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ನಿಮ್ಮ ಆತಂಕದ ಪ್ರಮಾಣವನ್ನು ಪತ್ತೆ ಮಾಡುತ್ತದೆ. ಜೊತೆಗೆ ನೀವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಲಹೆ ನೀಡುತ್ತದೆ.
ಹೇಗೆ ಕೆಲಸ ಮಾಡುತ್ತದೆ?: ಬಯೋ ಫೀಡ್‌ಬ್ಯಾಕ್ ಎನ್ನುವುದು ವ್ಯಕ್ತಿಯ ದೇಹದ ಅನೇಕ ಶಾರೀರಿಕ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವ ಸಾಧನ. ಅದೇ ರೀತಿ ಈ 'ಪ್ಯಾನಿಕ್ ಮೆಕ್ಯಾನಿಕ್' ಆ್ಯಪ್ ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲೂ ತನ್ನ ಕೆಲಸ ನಿರ್ವಹಿಸುತ್ತದೆ. ಅದರಲ್ಲೂ ಪ್ರಮುಖವಾಗಿ ವೃತ್ತಿಪರ ಕ್ಲಿನಿಕಲ್ಗಳಿಗೆ ಬಹಳ ಪೂರಕವಾಗಿದೆ.
ಫೋಟೊ ಪ್ಲೆಥಿಸ್ಮೋಗ್ರಫಿ ಎನ್ನುವ ಪರೀಕ್ಷೆಯನ್ನು ಹೋಲುವ ವಿಧಾನವನ್ನು ಈ ಆ್ಯಪ್ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ದೇಹದ ಆತಂಕದ ಪ್ರಮಾಣವನ್ನು ಅಳೆಯಲು ಫೋನ್‌ನಲ್ಲಿರುವ ಕ್ಯಾಮೆರಾ ಬಳಕೆಯಾಗುತ್ತದೆ.
ಆ್ಯಪ್ ತೆರೆದ ನಂತರ ಫ್ಲ್ಯಾಷ್ ಲೈಟ್ ವಿರುದ್ಧ ಬೆರಳನ್ನು ಹಿಡಿದಿಟ್ಟುಕೊಳ್ಳಬೇಕು .ಆಗ ಆ್ಯಪ್ ನಿಮ್ಮ ದೇಹದ ಆತಂಕದ ಪರಿಮಾಣವನ್ನು ಅಳೆಯುತ್ತದೆ ಎಂದು ಅಮೆರಿಕದ ವರ್ಮೊಂಟ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ಈ ಅಪ್ಲಿಕೇಶನ್‌ನ ಸಹ-ಡೆವಲಪರ್ ರಿಯಾನ್ ಮೆಕ್‌ಗಿನ್ನಿಸ್ ಹೇಳಿದ್ದಾರೆ.