ಮಧ್ಯ ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಇಬ್ಬರು ಸಹೋದರರು ಶಾರ್ಟ್ ವಿಡಿಯೋಗಳ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಇದು ಇತ್ತೀಚೆಗೆ ಭಾರತ ಬ್ಯಾನ್ ಮಾಡಿದ ಚೀನೀ ಟಿಕ್‌ಟಾಕ್ ಆ್ಯಪ್ಗೆ ಪರ್ಯಾಯವಾಗಿದೆ.
“ನ್ಯೂಕ್ಯುಲರ್” ಹೆಸರಿನ ಹೊಸ ಅಪ್ಲಿಕೇಶನ್ ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಸಾಫ್ಟ್‌ವೇರ್ ಇಂಜಿನಿಯರ್ ಮುಹಮ್ಮದ್ ಫಾರೂಕ್ ವಾನಿ ಮತ್ತು ಅವರ ಕಿರಿಯ ಸಹೋದರ ಟಿಪ್ಪು ಸುಲ್ತಾನ್ ವಾನಿ ಎಂಬಿಎ ಮತ್ತು ಸಾಫ್ಟ್‌ವೇರ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಇವರು ಇದುವರೆಗೆ ಮೂರು ಮೊಬೈಲ್ ಅಪ್ಲಿಕೇಶನ್‌ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಚೀನೀ ಟಿಕ್‌ಟಾಕ್‌ಗೆ ಪರ್ಯಾಯವಾಗಿ “ನ್ಯೂಕ್ಯುಲರ್” ಎಂಬ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಇದು ಇವರ ಇತ್ತೀಚಿನ ಹೊಸ ಆ್ಯಪ್ ಆಗಿದೆ. ಅದಾಗಲೇ ನೂರಕ್ಕೂ ಹೆಚ್ಚು ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಕೆಲವೇ ದಿನಗಳಲ್ಲಿ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದಾರೆ.
ಈ ಮೊದಲು, ವಾನಿ ಸಹೋದರರು ಕ್ರಮವಾಗಿ ಚೀನೀ ಶೇರ್ ಇಟ್ (SHAREit) ಮತ್ತು ಕ್ಯಾಮ್ ಸ್ಕ್ಯಾನರ್‌ಗೆ ಪರ್ಯಾಯವಾಗಿ “ಡಾಕ್ಯುಮೆಂಟ್ ಸ್ಕ್ಯಾನರ್” ಮತ್ತು “ಫೈಲ್ ಶೇರ್ಇಟ್ ಟೂಲ್” ಎಂಬ ಎರಡು ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದ್ದರು.
ಇ ಕುರಿತು ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಟಿಪ್ಪು ಸುಲ್ತಾನ್ ವಾನಿ, ಚೀನಾದ ಆ್ಯಪ್‌ಗಳನ್ನು ಸರ್ಕಾರ ನಿರ್ಬಂಧಿಸಿದ ಕೂಡಲೇ ಪರ್ಯಾಯ ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ಆಲೋಚನೆ ಬಂದಿತ್ತು. ಇದೀಗ ಅದು ಸಾಕಾರವಾಗಿದ್ದು, ಜನರು ಕೂಡ ನಮ್ಮ ಕೆಲಸವನ್ನು ಮೆಚ್ಚಿದ್ದಾರೆ. ನಮ್ಮ ಹಿಂದಿನ ಅಪ್ಲಿಕೇಶನ್‌ಗಳನ್ನು ನೋಡಿದ ನಂತರ, ಟಿಕ್ - ಟಾಕ್‌ಗೆ ಪರ್ಯಾಯ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಪ್ರಯತ್ನಿಸುವಂತೆ ಅನೇಕರು ನಮ್ಮನ್ನು ಕೇಳಿಕೊಂಡದರು. ನಾವಿಬ್ಬರು ಸಹೋದರರು ”ನ್ಯೂಕ್ಯುಲರ್” ಆ್ಯಪ್ ಅನ್ನು ಅಭಿವೃದ್ಧಿಪಡಿಸುವ ಈ ಯೋಜನೆಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ ಎಂದಿದ್ದಾರೆ.
ಈ ಅಪ್ಲಿಕೇಷನ್‌ನ ವಿಶೇಷ ಎಂದರೆ, ಈ ಮಾಡ್ಯೂಲ್ ಅನ್ನು 2ಜಿ ಇಂಟರ್ನೆಟ್ ವೇಗದಲ್ಲಿಯೂ ಬಳಸಬಹುದಾಗಿದೆ. “ನ್ಯೂಕ್ಯುಲರ್” ಟಿಕ್‌ಟಾಕ್ ಮಾಡುವಂತೆ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಇದನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ನಾವು ಈ ಅಪ್ಲಿಕೇಶನ್‌ಗೆ ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಸೇರಿಸಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಮತ್ತೆ ಅಪ್‌ಗ್ರೇಡ್ ಮಾಡುತ್ತೇವೆ ಎಂದರು.
"ನಿರುದ್ಯೋಗ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೀಗಾಗಿ ನಮ್ಮ ಜೀವನೋಪಾಯಕ್ಕಾಗಿ ಸೃಜನಶೀಲ ಮಾರ್ಗಗಳನ್ನು ಕಂಡುಹಿಡಿಯಬೇಕು ಮತ್ತು ಅವುಗಳಿಂದ ಇತರರಿಗೆ ಅನುಕೂಲವಾಗಬೇಕು" ಎಂದು ವಾನಿ ಹೇಳಿಕೊಂಡಿದ್ದಾರೆ.