ಪಶ್ಚಿಮ ಚಂಪಾರಣ್: ಭಾರತ ಹಾಗೂ ನೇಪಾಳ ದ್ವಿಪಕ್ಷೀಯ ಸಂಬಂಧವು ದಿನದಿಂದ ದಿನಕ್ಕೆ ಹದಗೆಡುತ್ತಿರುವ ಬೆನ್ನಲ್ಲೇ ಈಗ ಭಾರತ-ನೇಪಾಳ ಗಡಿಯ ವಾಲ್ಮೀಕಿ ನಗರ ಗಂಡಕರಾಜ್ ಪ್ರದೇಶದ ಬಳಿ ನೇಪಾಳ ಎರಡು ಟೆಂಟ್ಗಳನ್ನು ನಿರ್ಮಿಸಿ ದುಸ್ಸಾಹಸ ಮೆರೆದಿದೆ.
ಶಸ್ತ್ರಸಜ್ಜಿತ ಪೊಲೀಸರ ಬದಲಿಗೆ ಗಂಡಕ್ ಬ್ಯಾರೇಜ್ಗಳಲ್ಲಿ ಮಿಲಿಟರಿ ಯೋಧರನ್ನು ನಿಯೋಜಿಸಲು ನೇಪಾಳ ಸಿದ್ಧತೆ ನಡೆಸುತ್ತಿದೆ. ತನ್ನ ಪೊಲೀಸರು ಹಾಗೂ ಸೈನಿಕರ ಬಳಿಯಿರುವ ಹಳೆಯ ಕಾಲದ ಶಸ್ತ್ರಾಸ್ತ್ರಗಳ ಬದಲು ಚೀನಾ ನಿರ್ಮಿತ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲು ನೇಪಾಳ ಸಂಚು ರೂಪಿಸಿದೆ ಎಂದು ಹೆಸರು ಹೇಳಲಿಚ್ಛಿಸಿದ ಗಡಿ ಭಾಗದ ನಿವಾಸಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನೇಪಾಳ - ಭಾರತ ಗಡಿಯನ್ನು ಸಂಪೂರ್ಣ ಮುಚ್ಚಲಾಗಿದ್ದು, ಎರಡೂ ಕಡೆಯಿಂದ ಜನರ ಪ್ರವೇಶ ಸ್ಥಗಿತಗೊಂಡಿದೆ. ಲಾಕ್ಡೌನ್ ಅವಧಿಯಲ್ಲಿ ಸುನೌಲಿ ಮತ್ತು ಮಹೇಶಪುರ ಗಡಿಗಳಲ್ಲಿ ನೇಪಾಳ ಡಜನ್ಗೂ ಹೆಚ್ಚು ಮಿಲಿಟರಿ ಟೆಂಟ್ಗಳನ್ನು ನಿರ್ಮಿಸಿದೆ ಎಂದು ಮೂಲಗಳು ಹೇಳಿವೆ.
ಗಡಿಯ ಪಂಥೋಲಾ ಗ್ರಾಮದ ಬಳಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಟೆಂಟ್ ಹಾಗೂ ವಿಚಕ್ಷಣಾ ಗೋಪುರಗಳನ್ನು ಮಿಲಿಟರಿ ಮಾತುಕತೆಗಳ ನಂತರ ನೇಪಾಳ ತೆರವುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಲಾಕ್ಡೌನ್ ಸಮಯದಲ್ಲಿ ಭಾರತದ ಭೂಪ್ರದೇಶವಾಗಿರುವ ಸರಿಸಾವಾ ನದಿಯ ಮತ್ತೊಂದು ಬದಿಯಲ್ಲಿ ನೇಪಾಳ ಟೆಂಟ್ ನಿರ್ಮಾಣ ಮಾಡಿದ್ದರಿಂದ ಎರಡೂ ದೇಶಗಳ ಮಧ್ಯೆ ಸಂಘರ್ಷದ ಪರಿಸ್ಥಿತಿ ತಲೆದೋರಿತ್ತು. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ಭದ್ರತಾ ಪಡೆಗಳ ಮಧ್ಯೆ ಹಲವಾರು ಬಾರಿ ಜಟಾಪಟಿಗಳು ನಡೆದಿದ್ದವು.
ಈ ಮಧ್ಯೆ ಕಠ್ಮಂಡು ಹಾಗೂ ನವದೆಹಲಿಗಳ ಮಧ್ಯೆ ರಾಜಕೀಯ ಸಂಘರ್ಷವೂ ತಲೆದೋರಿದ್ದು, ಗಡಿಯಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಒಂದು ಕಡೆ ಪಾಕಿಸ್ತಾನ, ಇನ್ನೊಂದು ಕಡೆ ನೇಪಾಳ ಮಗದೊಂದು ಕಡೆ ಚೀನಾ ಭಾರತವನ್ನ ಕೆಣಕುತ್ತಿವೆ.