ಕಾನ್ಪುರ(ಉತ್ತರ ಪ್ರದೇಶ): ಕಾನ್ಪುರ ಪೊಲೀಸರು ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ. ಆದರೆ ಈ ದಂಧೆ ನಡೆಸುತ್ತಿದ್ದ ಕಿಂಗ್‌ಪಿನ್ ಸಂತೋಷ್ ಸೋನಿ ಎಂಬಾತ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ನೀಟ್-ಜೆಇಇ ಪರೀಕ್ಷೆಗಳ ವಿಚಾರವಾಗಿ ಬೆಟ್ಟಿಂಗ್ ನಡೆಸಲಾಗಿತ್ತು. ಕಳೆದ 4 ವರ್ಷಗಳಿಂದ ಇವರು ದಂಧೆಯಲ್ಲಿದ್ದು, ಸದ್ಯ ವಾಟ್ಸಪ್ ಮೂಲಕ ದಂಧೆ ನಡೆಸುತ್ತಿದ್ದರು.
"ನಾವು ಶುಕ್ರವಾರ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ್ದೇವೆ ಮತ್ತು 7 ಜನರನ್ನು ಬಂಧಿಸಿದ್ದೇವೆ. ಈ ವೇಳೆ 38.25 ಲಕ್ಷ ರೂಪಾಯಿ ನಗದು ಹಾಗೂ 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಆದರೆ ಈ ವೇಳೆ ಕಿಂಗ್‌ಪಿನ್ ಸಂತೋಷ್ ಸೋನಿ ತಪ್ಪಿಸಿಕೊಂಡಿದ್ದಾನೆ. ನೀಟ್-ಜೆಇಇ ಪರೀಕ್ಷೆಗಳು ನಡೆಯಲಿವೆಯೇ ಅಥವಾ ಇಲ್ಲವೇ ಎಂಬ ವಿಚಾರವಾಗಿ ಬೆಟ್ಟಿಂಗ್ ಇರಿಸಿದ್ದರು" ಎಂದು ಕಾನ್ಪುರ ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ದೀಪಕ್ ಭೂಕರ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಬಂಧಿತ ವ್ಯಕ್ತಿಗಳು ಸೆನ್ಸೆಕ್ಸ್ ಮತ್ತು ಇತರ ಮಾರುಕಟ್ಟೆಗಳ ಸಂಖ್ಯೆಗಳ ಏರಿಳಿತದ ಮೇಲೆ, ಮಾರುಕಟ್ಟೆಯನ್ನು ಮುಚ್ಚುವ ಮತ್ತು ತೆರೆಯುವ ಕೊನೆಯ ಎರಡು ಅಂಕೆಗಳ ಮೇಲೆಯೂ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.