ಹೊಸದಿಲ್ಲಿ: ದೇಶಾದ್ಯಂತ ವಿಧಿಸಲಾಗಿರುವ ಲಾಕ್ಡೌನ್ ಕೌಟುಂಬಿಕ ಜೀವನದ ಮೇಲೂ ಹಲವಾರು ರೀತಿಯ ಕರಾಳ ಪರಿಣಾಮ ತೋರಿಸಲಾರಂಭಿಸಿದೆ. ಲಾಕ್ಡೌನ್ ಅವಧಿಯಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.
ಮಹಿಳೆಯರಿಗೆ ಗಂಡಂದಿರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಹಾಗೂ ನಿಂದಿಸುವ ಪ್ರಕರಣಗಳು ವಿಶೇಷವಾಗಿ ಹೆಚ್ಚಾಗುತ್ತಿವೆ ಎಂದು ಮಹಿಳಾ ಆಯೋಗ ಕಳವಳ ವ್ಯಕ್ತಪಡಿಸಿದೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ತಡೆಗೆ ಮಹಿಳಾ ಆಯೋಗ ಮುಂದಾಗಿದ್ದು, ಹಲವಾರು ಕ್ರಮಗಳನ್ನು ಪ್ರಕಟಿಸಿದೆ.
ಲಾಕ್ಡೌನ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆಗಾಗಿ ಮೀಸಲಾದ ಸಮಿತಿಯೊಂದನ್ನು ಆಯೋಗ ರಚಿಸಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಹೆಲ್ಪ್ ಡೆಸ್ಕ್ ರಚಿಸಲಾಗಿದ್ದು, ಸಂತ್ರಸ್ತ ಮಹಿಳೆಯರು ‘help@ncw@gmail.com’ ಇ-ಮೇಲ್ ಐಡಿಗೆ ನೇರವಾಗಿ ದೂರು ನೀಡಬಹುದು.
"ರಾಷ್ಟ್ರೀಯ ಮಹಿಳಾ ಆಯೋಗ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆಗೆ ವಿಶೇಷ ತಂಡವನ್ನು ರಚಿಸಿದೆ. ಪೊಲೀಸರೂ ನಮ್ಮ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಸಮಸ್ಯೆಯಿಂದ ಕೆಲ ಮಹಿಳೆಯರಿಗೆ ತಮ್ಮ ಕುಟುಂಬವನ್ನು ಸೇರಿಕೊಳ್ಳಲಾಗುತ್ತಿಲ್ಲ. ಇಂಥ ಸಂದರ್ಭಗಳಲ್ಲಿ ಮಾನಸಿಕ ಖಿನ್ನತೆಗೊಳಗಾಗುವ ಮಹಿಳೆಯರ ಸಹಾಯಕ್ಕಾಗಿ 'ಸಖಿ' ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇದಕ್ಕಾಗಿ ಎನ್ಜಿಓಗಳ ಸಹಾಯ ಪಡೆಯಲಾಗುವುದು." ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದ್ದಾರೆ.
"ಮಾ.24 ರಿಂದ ಏ.7 ರ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಸೈಬರ್ ಕ್ರೈಂ ಸೇರಿದಂತೆ 329 ದೂರು ಬಂದಿವೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಾದ ದೆಹಲಿ, ಪಂಜಾಬ್, ಹರಿಯಾಣ ಹಾಗೂ ಬಿಹಾರ ರಾಜ್ಯಗಳಿಂದ ಹೆಚ್ಚು ದೂರು ದಾಖಲಾಗಿವೆ." ಎಂದು ರೇಖಾ ಶರ್ಮಾ ಹೇಳಿದ್ದಾರೆ.