ನವದೆಹಲಿ: ಕೊರೊನಾ ಸೋಂಕು ತಡೆಯಲು ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿರುವ ಸಮಯದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಅಧಿಕವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಗೂಗಲ್, ಟ್ವಿಟರ್ ಮತ್ತು ವಾಟ್ಸ್ಆ್ಯಪ್ ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೋಟಿಸ್ ಜಾರಿಮಾಡಿದೆ.
ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿಡಿಯೋ ಲಭ್ಯತೆಯ ಬಗ್ಗೆ ಸ್ವತಂತ್ರ ವಿಚಾರಣೆ ಪ್ರಾರಂಭಿಸಿದೆ. ಭಾರತ ಮಕ್ಕಳ ಸಂರಕ್ಷಣಾ ನಿಧಿಯ ಇತ್ತೀಚಿನ ವರದಿಯನ್ನು ಉಲ್ಲೇಖಿಸಿದೆ. ಲಾಕ್‌ಡೌನ್ ಸಮಯದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹುಡುಕುತ್ತಿರುವವರಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ಉಲ್ಲೇಖಿಸಿದ್ದು, ಏಪ್ರಿಲ್ 30ರ ಒಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ಭಾರತ ಸೇರಿದಂತೆ ವಿದೇಶಿ ಪೋರ್ನ್ ಸೈಟ್‌ಗಳ ಮೂಲಕ ಜನರು, ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳನ್ನು ನೋಡುವುದು ಹೆಚ್ಚಾಗಿದ್ದು, ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ಆತಂಕ ವ್ಯಕ್ತಪಡಿಸಿದೆ.
13 ವರ್ಷದ ಮೇಲಿ ಮಕ್ಕಳು ಕೂಡ ಟ್ವಿಟರ್ ಖಾತೆಯನ್ನು ತೆರೆಯುವುದಕ್ಕೆ ಅವಕಾಶವಿದೆ. ಟ್ವಿಟರ್‌ನಲ್ಲಿ ಲಭ್ಯವಿರುವ ಲಿಂಕ್‌ಗಳನ್ನು ಬಳಸಿ ಮಕ್ಕಳು ಸಹ ಅಶ್ಲೀಲ ಚಿತ್ರಗಳನ್ನು ನೋಡಲು ಅವಕಾಶ ಕಲ್ಪಿಸಿದಂತಾಗಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ತಿಳಿಸಿದೆ.
ಗೂಗಲ್ ಇಂಡಿಯಾಕ್ಕೆ ನೀಡಿದ ನೋಟಿಸ್‌ನಲ್ಲಿ, 'ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗಳ ಮೂಲಕ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡಬಹುದು. ಆ ಮೂಲಕ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸಬಹುದು. ಇದು ಆತಂಕಕಾರಿ ವಿಚಾರ' ಎಂದು ಹೇಳಿದೆ.
ಇತ್ತ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲೂ ವಿಪರೀತವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಲಿಂಕ್ಗಳು ಹರಿದಾಡುತ್ತಿರುವುದನ್ನು ಆಯೋಗ ಗಮನಿಸಿದೆ ಎಂದು ನೋಟೀಸ್ನಲ್ಲಿ ತಿಳಿಸಿದೆ.
ಲಾಕ್‌ಡೌನ್‌ಗೂ ಮೊದಲ ಸಮಯಕ್ಕೆ ಹೋಲಿಸಿದರೆ ಮಾರ್ಚ್ 24 ಮತ್ತು 26ರ ನಡುವೆ ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಹುಡುಕಾಟದಲ್ಲಿ ಇಂಟರ್ನೆಟ್ ದಟ್ಟಣೆ ಶೇಕಡಾ 95 ರಷ್ಟು ಹೆಚ್ಚಾಗಿದೆ ಎಂದು ಆಯೋಗ ಹೇಳಿದೆ.