ಧಮ್ತಾರಿ (ಛತ್ತೀಸ್ಗಢ): ಧಮ್ತಾರಿ ಜಿಲ್ಲೆಯಲ್ಲಿ ಪೊಲೀಸರು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಕೆಂಪು ಉಗ್ರ ಸಾವನ್ನಪ್ಪಿದ್ದಾನೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಧಮ್ತಾರಿಯಿಂದ 80 ಕಿಮೀ ದೂರದಲ್ಲಿರುವ ನಾಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಘೋರಗಾಂವ್ ಗ್ರಾಮದ ಕಾಡಿನಲ್ಲಿ ಭಾನುವಾರ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಓರ್ವ ನಕ್ಸಲ್ ಸಾವನ್ನಪ್ಪಿದ್ದಾನೆ.
ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ತಂಡ ಕಾಡಿನಲ್ಲಿ ಗಸ್ತು ತಿರುಗುತ್ತಿದ್ದಾಗ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಕ ಪ್ರತ್ಯುತ್ತರ ನೀಡಲು ಮುಂದಾದ ಪೊಲೀಸ್ ಪಡೆ ಓರ್ವವನ್ನು ಹೊಡೆದುರುಳಿಸಿದೆ. ಘಟನೆ ನಡೆದ ಬಳಿಕ ನಕ್ಸಲೀಯನ ಮೃತದೇಹ ಹಾಗೂ ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತ ನಕ್ಸಲ್ ಮಾವೋವಾದಿಗಳ ಗೋಬ್ರಾ ಲಾಸ್ನ ಸಕ್ರಿಯ ಸದಸ್ಯ ರವಿ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಜಾರ್ಖಂಡ್ನ ರಾಂಚಿಯಲ್ಲಿ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್‌ಎಫ್‌ಐ)ಗೆ ಸೇರಿದ ಮೂವರು ನಕ್ಸಲ್‌ಗಳನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ನಮ್ಕುಮ್ ಮತ್ತು ಪಾಂಡ್ರಾ ಪೊಲೀಸ್ ಠಾಣೆ ಪ್ರದೇಶಗಳಲ್ಲಿ ನಕ್ಸಲರನ್ನು ಬಂಧಿಸಲಾಗಿದೆ. ನಕ್ಸಲರಿಂದ ಎರಡು ಪಿಸ್ತೂಲ್, 29 ಕಾರ್ಟ್ರಿಜ್ ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದೆ.