ಶ್ರೀನಗರ: ದೇಶದೆಲ್ಲೆಡೆ ರಂಜಾನ್ ಹಬ್ಬದ ಸಂಭ್ರಮವಿದ್ದರೆ, ಕಣಿವೆ ರಾಜ್ಯದಲ್ಲಿ ಪ್ರತ್ಯೇಕವಾದಿಗಳ ಗುಂಪು ಭದ್ರತಾಪಡೆ ಯೋಧರ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಆನಂತನಾಗ್ ಹಾಗೂ ಸೂಪೂರ್ ಭಾಗದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಕಿಡಿಗೇಡಿಗಳು, ಪ್ರತ್ಯೇಕವಾದಿ ಸಂಘಟನೆಗಳ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಶ್ರೀನಗರದ ಜಾಮಿಯಾ ಮಸೀದಿ ಬಳಿ ಭದ್ರತಾ ಪಡೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅಲ್ಲದೆ, ಉಗ್ರ ಝಾಕಿರ್ ಮೂಸಾ ಹಾಗೂ ಮಸೂದ್ ಅಜರ್ನನ್ನು ಬೆಂಬಲಿಸುವಂತಹ ಪೋಸ್ಟರ್ಗಳನ್ನು ಹಿಡಿದು ಪುಂಡಾಟಿಕೆ ನಡೆಸಿದ್ದಾರೆ.
ಕಿಡಿಗೇಡಿಗಳ ಗೂಂಡಾವರ್ತನೆ ತಡೆಯಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಪ್ರಯೋಗಿಸಿದರು. ಸದ್ಯ ಕೆಲವೆಡೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಇನ್ನು ಕೆಲವಡೆ ಉದ್ವಿಗ್ನ ಪರಿಸ್ಥಿತಿಯಿದೆ.
ಕಣಿವೆ ರಾಜ್ಯದ ವಿಧಾನಸಭಾ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವ ಸಂಬಂಧ ಅಮಿತ್ ಶಾ ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದು, ಈ ಪ್ರತಿಭಟನೆಗೆ ಕಾರಣ ಎನ್ನಲಾಗಿದೆ.
ಅಲ್ಲದೇ, ಇಂದು ಬೆಳಗ್ಗೆ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ನಿಗೇನ ಬಾನು ಎಂಬ ಮಹಿಳೆ ಮೃತಪಟ್ಟಿದ್ದಾರೆ. ಮೊಹಮ್ಮದ್ ಸುಲ್ತಾನ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.